Friday, November 20, 2026

ಪ್ರಾಯೋಗಿಕ ಆವೃತ್ತಿ

ಕಲೆಯಿಂದ ಸರ್ವರನ್ನು ಒಗ್ಗೂಡಿಸಲು ಸಾಧ್ಯ – ಗೊಲ್ಲಹಳ್ಳಿ ಶಿವಪ್ರಸಾದ್

ವಿಕೃತ ಮನಸ್ಸು ವಿನಾಶಕಾರಿ ಆಲೋಚನೆಗಳಿಂದಾಗಿ ದಿನದಿಂದ ದಿನಕ್ಕೆ ಮನುಷ್ಯ ಸಂಬಂಧಗಳು ತಾರತಮ್ಯದ ಕರಾಳತೆಯತ್ತ ಸಾಗುತ್ತಿವೆ, ಇಂತಹ ಅಘಾತಕಾರಿ ಬೆಳವಣಿಗೆಗೆ ಅಂತ್ಯ ಹಾಡಲು ಮಾನವಕುಲ ಒಂದಾಗಬೇಕಿದೆ, ಅದು ಕಲೆಯಿಂದ ಮಾತ್ರ ಸರ್ವರನ್ನು ಒಗ್ಗೂಡಿಸಲು ಸಾಧ್ಯ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.

ಅರುವಿ ಟ್ರಸ್ಟ್, ವೀನಸ್ ಅಕಾಡೆಮಿ ಮಂಡ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಮಂಡ್ಯದ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿದ್ದ ಅರುವಿ ಸಾಂಸ್ಕೃತಿಕ ಉತ್ಸವ-2024 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿಗಿಂತ ಇಂದು ಸಮನ್ವಯದ ಕೊರತೆ ಕಾಣುತ್ತಿದೆ, ಇದನ್ನು ಸರಿಪಡಿಸಲಿಕ್ಕಾಗಿ ಸಾಂಸ್ಕೃತಿಕ ವಲಯ ಇನ್ನೂ ಹೆಚ್ಚು ಹೊಸ ಹೊಸ ಚಿಂತನೆಗಳನ್ನು ನಡೆಸಿ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತ ಗೊಳಿಸಬೇಕಾದ ಅಗತ್ಯ ಇದೆ ಎಂದರು.

ಮುಂದಿನ ದಿನಮಾನಗಳಲ್ಲಿ ಹೊಸ ತಲೆಮಾರಿಗೆ ಕಲೆಯನ್ನ ವರ್ಗಾಯಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಕಲೆ, ಸಂಸ್ಕೃತಿ, ಆಚರಣೆ, ಸಂಬಂಧಗಳು ಈ ಎಲ್ಲದರ ಮೇಲೆ ಮೊಬೈಲ್ ಎಂಬ ರಕ್ಕಸನ ದಾಳಿ ಶುರುವಾಗಿದೆ. ಈ ದಾಳಿಯಿಂದ ಪಾರಾಗಿ ಮನುಷ್ಯ ಮನುಷ್ಯರ ನಡುವೆ ಮಾನವೀಯ ಮೌಲ್ಯಗಳನ್ನ ಪಸರಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯವಿದೆ, ಈ ಕಾರ್ಯಕ್ರಮಗಳ ನಿರಂತರ ಪ್ರಕ್ರಿಯೆಗಳು ಸದಾ ಕಾಲಕ್ಕೂ ನಡೆಯುತ್ತಾ ಮುನ್ನಡೆಸುವಂತಾಗಬೇಕು, ಸಾಂಸ್ಕೃತಿಕ ವಲಯ ಬಂಜರಾಗುವ ಮೊದಲೇ ಈ ನೆಲದ ಎಲ್ಲಾ ಕಲೆಗಳನ್ನ ಮತ್ತೆ ಮತ್ತೆ ಬಿತ್ತುವ ಕೆಲಸಗಳು ಸಮರೋಪಾದಿಯಲ್ಲಿ ಸಾಗಬೇಕಿದೆ, ಆಗ ಮಾತ್ರ ಭವ್ಯ ಭಾರತ ಜಗತ್ತಿನ ಎಲ್ಲಾ ದೇಶಗಳಿಗಿಂತಲೂ ದೊಡ್ಡ ಮಟ್ಟದ ಸಾಂಸ್ಕೃತಿಕ ದೇಶವಾಗಿ ಉಳಿದುಕೊಳ್ಳಲು ಸಾಧ್ಯ ಎಂದು ತಿಳಿಸಿದರು,

ಕಾರ್ಯಕ್ರಮವನ್ನು ಉದ್ಘಾಟಿಸಿದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಎ ಸಿ ರಮೇಶ್ ಮಾತನಾಡಿ,  ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ರಂಗಗೀತೆ, ನಾಟಕ, ತತ್ವಪದ, ದೇಶಭಕ್ತಿ ಗೀತೆ, ಸೋಬಾನ ಪದ ಈ ತರದ ಕಲೆಗಳನ್ನು ಕಲಿಸುವ ಬಗ್ಗೆ ಪೋಷಕರು ಆಸಕ್ತಿ ತೋರದೆ ಮಕ್ಕಳಲ್ಲಿ ಸಾಂಸ್ಕೃತಿಕ ದಾರಿದ್ಯ ತಲೆದೋರುತ್ತಿದೆ ಇದು ಹೀಗೆ ಮುಂದುವರಿದರೆ ಮುಂದೆ ದೊಡ್ಡ ದುರಂತವನ್ನು ನಾವು ಎದುರಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೀನೆಸ್ ಅಕಾಡೆಮಿ ಹಾಗೂ ಅರುವಿ ಟ್ರಸ್ಟ್ ನ ಸಂಸ್ಥಾಪಕ ಅರುಣ ಈಶ್ವರ್ ಮಾತನಾಡಿ ಅರುವಿ ಟ್ರಸ್ಟ್ ಹಾಗೂ ವೀನಸ್ ಅಕಾಡೆಮಿಯು ಕಳೆದ ಎಂಟು ವರ್ಷಗಳಿಂದ ಶಾಲಾ ಶಿಕ್ಷಣಕ್ಕೆ ಪೂರಕವಾದ ಅಬಾಕಸ್ ಟ್ಯೂಷನ್ ಸ್ಪೋಕನ್ ಇಂಗ್ಲೀಷ್ ಹಾಗೂ ಚೇಸ್ ತರಗತಿಗಳನ್ನು ನಡೆಸುತ್ತಾ ಬರುತ್ತಿದ್ದೇವೆ, ಇದರ ಅನುಕೂಲವು ಸಾಕಷ್ಟು ಮಧ್ಯಮ ವರ್ಗದ ಜನರಿಗೆ ಆಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳಾದ ಕೋಮಲ್ ಕುಮಾರ್, ಮಧುರ ಮಂಡ್ಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ವಿನಯ್ ಕುಮಾರ್, ಈಶ್ವರ ಸ್ವಾಮಿ, ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ ಸದಸ್ಯರಾದ ಮಂಜೇಶ್ ಚನ್ನಪುರ, ಕಾರಸವಾಡಿ ಮಹದೇವು, ದೇವರಾಜ್ ಕೊಪ್ಪ, ಎಂ ಸಿ ಲಂಕೇಶ್, ರಂಗಲಕ್ಷಣಂ ಫೌಂಡೇಶನ್ ನ ವಿದುಷಿ ಡಾ.ಚಿತ್ರ ಉಮಾಪತಿ, ಎನ್.ಶೇಖರ್ ಹನಿಯಂಬಾಡಿ, ಬಸವರಾಜು ಸಂತೆಕಸಲಗೆರೆ, ವೀನಶ್ ಅಕಾಡೆಮಿಯ ಶಿಕ್ಷಕರಾದ ದೀಪಾಶ್ರೀ, ವಾಣಿ, ಯಶೋಧ, ಫೈಝಲ್ ಮೋನ್ ಭಾಗವಹಿಸಿದ್ದರು, ನಂತರ ವೀನಸ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಿತ್ಯ ಸ್ನೇಹಿ ಕಲಾತಂಡದಿಂದ ಸುಗಮ ಸಂಗೀತ ಮತ್ತು ನಾಟಕ ಪ್ರದರ್ಶನ ಹಾಗೂ ಸಿರಿಗೆರೆ ಧಾತ್ರಿ ರಂಗಸಂಸ್ಥೆಯಿಂದ ಶ್ರೀ ಕೃಷ್ಣ ಸಂಧಾನ ಎಂಬ ಹಾಸ್ಯ ನಾಟಕ ಪ್ರದರ್ಶಿಸಲಾಯಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ