ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳು ಜನರೊಂದಿಗೆ ಕನ್ನಡ ಭಾಷೆಯಲ್ಲಿ ಸಂವಹನ ನಡೆಸಿ ಯೋಜನೆ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಸಂಸದೆ ಸುಮಲತಾ ಅಂಬರೀಶ್ ಸಲಹೆ ನೀಡಿದರು.
ಮಂಡ್ಯ ನಗರದಲ್ಲಿರುವ ಬ್ಯಾಂಕ್ ಆಫ್ ಬರೋಡ ಸ್ವಉದ್ಯೋಗ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ,ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್, ಅಟಲ್ ಪಿಂಚಣಿ ಯೋಜನೆ, ಪಿಎಂಇಜಿಪಿ ಹಾಗೂ ಇತರೆ ಯೋಜನೆಗಳ ಫಲಾನುಭವಿಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಅಟಲ್ ಪಿಂಚಣಿ ಯೋಜನೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಬಹಳಷ್ಟು ಕಡಿಮೆ ನೋಂದಣಿಯಾಗಿವೆ. ಇದರ ಬಗ್ಗೆ ಹೆಚ್ಚು ಜಾಗೃತಿಯನ್ನು ಜನಸಾಮಾನ್ಯರಿಗೆ ಮೂಡಿಸಿ ಎಂದು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ.ಆರ್.ಜೆ ದಿವ್ಯಪ್ರಭು ಅವರು ಮಾತನಾಡಿ, ಸಿ.ಡಿ. ಶೇ.13.71ರಷ್ಟು ಸಾಧನೆಯನ್ನು ಮಾಡಿದ್ದೇವೆ.ಇದು ನಿಜಕ್ಕೂ ಶ್ಲಾಘನೀಯ ಎಂದರು.
ಜಿಲ್ಲೆಯಲ್ಲಿ ಕಡಿಮೆ ಸಿ.ಡಿ.ರೇಷಿಯೊ ಇರುವಂತಹ ಬ್ಯಾಂಕುಗಳು ಅದನ್ನು ಹೆಚ್ಚಿಸುವ ಹಾಗೆ ಗಮನಹರಿಸಿ ಕಾರ್ಯನಿರ್ವಹಿಸಬೇಕು ಎಂದರು.
ಆದ್ಯತೆಯ ವಲಯದಲ್ಲಿ ಕೃಷಿಯಲ್ಲಿ ಶೇ.17.01 ಸಾಧನೆ ಮಾಡಿದ್ದೇವೆ. ತಾಲ್ಲೂಕುವಾರು ಕೆ. ಆರ್.ಪೇಟೆ ಶೇ.125, ನಾಗಮಂಗಲ ತಾಲ್ಲೂಕು ಶೇ.83 ಉಳಿದ ತಾಲ್ಲೂಕುಗಳು ಶೇ.100ರಷ್ಟು ಗುರಿ ತಲುಪಿದೆ ಎಂದರು.
ನಾಗಮಂಗಲ ತಾಲೂಕಿನಲ್ಲಿ ಆದ್ಯತೆಯ ವಲಯದಲ್ಲಿ ಹೆಚ್ಚು ಮಾಹಿತಿ ನೀಡಿ ಶಿಬಿರಗಳನ್ನು ಏರ್ಪಡಿಸಿ ಉತ್ತಮ ಮಟ್ಟದಲ್ಲಿ ಗುರಿ ತಲುಪಬೇಕು ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕರಾದ ಎಂ.ಪಿ.ದೀಪಕ್ ಅವರೆ ಮಾತನಾಡಿ ಮಾರ್ಚ್ 2022ರ ಅಂತ್ಯದ ನಾಲ್ಕನೇ ತ್ರೈಮಾಸಿಕ ಸಭೆಯ ಪ್ರಗತಿ ಒಟ್ಟು ವಾರ್ಷಿಕ 5726.00 ಕೋಟಿ ರೂ ಗುರಿಯಲ್ಲಿ ಪ್ರತಿಶತ ಶೇ.102.38 ತಲುಪಲಾಗಿದೆ ಎಂದರು.
ತಾಲ್ಲೂಕುವಾರು ಸಾಧನೆಯಲ್ಲಿ ಕೆ.ಆರ್. ಪೇಟೆ ಪ್ರಥಮ ಸ್ಥಾನದಲ್ಲಿದ್ದರೆ,ಮದ್ದೂರು, ದ್ವಿತೀಯ ಸ್ಥಾನದಲ್ಲಿದೆ. ಹಾಗೂ ಇನ್ನುಳಿದ ತಾಲ್ಲೂಕುಗಳಾದ ಮಳವಳ್ಳಿ, ಶ್ರೀರಂಗಪಟ್ಟಣ, ಮಂಡ್ಯ ಪಾಂಡವಪುರ ಹಾಗೂ ನಾಗಮಂಗಲ ಕ್ರಮವಾಗಿ ನಂತರದ ಸ್ಥಾನದಲ್ಲಿವೆ ಎಂದರು.
ಜಿಲ್ಲೆಯಲ್ಲಿ ದುರ್ಬಲ ವರ್ಗದವರಿಗೆ ಇಲ್ಲಿಯವರೆಗೆ ಒಟ್ಟು ರೂ. 2615.02 ಕೋಟಿ ಸಾಲ ವಿತರಣೆ ಆಗಿರುತ್ತದೆ. ಡಿ.ಆರ್.ಐ. ಅಡಿಯಲ್ಲಿ ರೂ. 4.5 ಕೋಟಿ ವಿತರಣೆ ಆಗಿರುತ್ತದೆ ಎಂದು ತಿಳಿಸಿದರು.
ಸರ್ಕಾರದ ಇತರ ಬಡತನ ನಿರ್ಮೂಲನಾ ಯೋಜನೆಗಳಾದ ಪಿ.ಎಮ್.ಇ.ಜಿ.ಪಿ, ಉದ್ಯೋಗಿನಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳಾದ ಸ್ವಉದ್ಯೋಗ ಯೋಜನೆ ಮತ್ತು ಇ.ಡಿ.ಪಿ ಯೋಜನೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಯೋಜನೆಗಳು, ದೇವರಾಜ ಅರಸು ಅಭಿವೃದ್ಧಿ ನಿಗಮದ ಯೋಜನೆಗಳು ಮತ್ತು ಪಶು ಸಂಗೋಪನೆ ಇಲಾಖೆಗಳ ವಿವಿಧ ಯೋಜನೆಗಳ ಅಡಿಯಲ್ಲಿನ ಪ್ರಗತಿ ಉತ್ತಮವಾಗಿದೆ, ಬಾಕಿ ಉಳಿದ ಅರ್ಜಿಗಳನ್ನು ಅರ್ಹ ಫಲಾನುಭವಿಗಳಿಗೆ ಸಾಲಮಂಜೂರು ಮಾಡಲು ಕೋರಲಾಗಿದೆ ಎಂದರು.
ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿಯೂ ಸಹ ಇನ್ನು ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಸಾಲ ಮಂಜೂರಾತಿ ಮಾಡಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗಾಗಿ ಜಾರಿ ಮಾಡಲಾಗಿರುವ ಸ್ಟ್ಯಾಂಡ್ ಆಪ್ ಇಂಡಿಯಾ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರಿವು ಮೂಡಿಸಬೇಕು ಎಂದರು.
2021-22 ನೇ ಸಾಲಿನ ಮಂಡ್ಯ ಜಿಲ್ಲಾ ಸಾಲ ಯೋಜನೆ ಮತ್ತು ಸರ್ಕಾರದ ಇತರ ಬಡತನ ನಿರ್ಮೂಲನಾ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಲು ಸೂಚಿಸಿದರು.
ಸಭೆಯಲ್ಲಿ ಆರ್.ಬಿ.ಐ ವ್ಯವಸ್ಥಾಪಕರಾದ ಸುಪ್ರಿಯಾ ಬ್ಯಾನರ್ಜಿ, ನಬಾರ್ಡ್ ನ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕರಾದ ಹರ್ಷಿತ, ಸೇರಿದಂತೆ ಇತರರು ಉಪಸ್ಥಿತರಿದ್ದರು.