ಪ್ರಸ್ತುತ ದೇಶದಲ್ಲಿ ಹೆಚ್ಚಿನ ಯುವಜನತೆ ಮಾದಕ ವಸ್ತುಗಳಿಗೆ ಮಾರು ಹೋಗುತ್ತಿದ್ದು,ಇವುಗಳನ್ನು ತ್ಯಜಿಸಿ ಉತ್ತಮ ಆರೋಗ್ಯದತ್ತ ಗಮನಕೊಡುವ ಮೂಲಕ ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿಕುಮಾರಿ ತಿಳಿಸಿದರು.
ಮಂಡ್ಯ ನಗರದ ಉಮ್ಮಡಹಳ್ಳಿ ಗೇಟ್ ಬಳಿ ಇರುವ ಮಾಂಡವ್ಯ ಎಕ್ಸಲೆನ್ಸ್ ಪಿ.ಯು ಕಾಲೇಜಿನಲ್ಲಿ ನಡೆದ ಆರೋಗ್ಯ ಮತ್ತು ಮಾನವೀಯ ಬಿಕ್ಕಟ್ಟುಗಳಲ್ಲಿ ಮಾದಕ ದ್ರವ್ಯದ ಸವಾಲುಗಳನ್ನು ಎದುರಿಸುವುದೆಂಬ ಘೋಷಣೆಯಡಿಯಲ್ಲಿ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳು ನಮ್ಮ ಸಮಾಜಕ್ಕೆ ಮಾರಕವಾಗಿದೆ. 17 ವರ್ಷ ಯುವಕನಿಗೆ ಮಾದಕ ವಸ್ತು ಬಗ್ಗೆ ಮೊದಲು ಕುತೂಹಲ ಹುಟ್ಟುತ್ತದೆ. ಪ್ರಸ್ತುತ ಅಧ್ಯಯನ ಪ್ರಕಾರ 17 ವರ್ಷದಿಂದ 28 ವರ್ಷದವೊಳಗಿನವರು ಮಾದಕ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಇವುಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇದೇ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್. ಧನಂಜಯ ಮಾತನಾಡಿ,ಯಾವುದೇ ತರಹದ ದುಶ್ಚಟ ಪ್ರಾರಂಭ ವಾಗುವುದು ಹೆಚ್ಚಾಗಿ ಕಾಲೇಜು ಹಂತದಲ್ಲಿ. ಆರಂಭದಲ್ಲಿ ಮಾದಕ ವಸ್ತುಗಳ ಸೇವನೆಯಲ್ಲಿ ಕುತೂಹಲದಿಂದ ಶುರುವಾಗಿ ನಂತರ ಚಟವಾಗಿ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದರು.
ಇದೇ ವೇಳೆಯಲ್ಲಿ ಭಾರತದ ಪ್ರಜೆಯಾದ ನಾನು ನಶೆ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯಾರಾದರೂ ಮಾದಕ ವಸ್ತುಗಳನ್ನು ಸೇವಿಸುವುದಾಗಲಿ ಅಥವಾ ಮಾರಾಟ ಮಾಡುವುದಾಗಲಿ, ಅಕ್ರಮ ಸಾಗಣಿಕೆ ಮಾಡುವುದಾಗಲಿ ಕಂಡು ಬಂದಲ್ಲಿ ಪ್ರಾಮಾಣಿಕವಾಗಿ ತಡೆಯುವ ಪ್ರಯತ್ನ ಮಾಡುತ್ತೇನೆ ಹಾಗೂ ಮಾದಕ ದ್ರವ್ಯ ಸೇವನೆ ವಿರೋಧಿ ಚಟುವಟಿಕೆಗಳಿಗೆ ಮತ್ತು ಕಾಯ್ದೆಯನ್ನು ಬಲಪಡಿಸಲು ಸಂಪೂರ್ಣ ಸಹಕಾರ ನೀಡುತ್ತೇನೆಂದು ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಪ್ರತಿಜ್ಞೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಬಿ.ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಡಾ.ಬಿ ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಭವಾನಿ ಶಂಕರ್ ಕೆ ಜಿ, ಜಿಲ್ಲಾ ಕ್ಷಯಾರೋಗ ನಿರ್ಮೂಲನಾಧಿಕಾರಿ ಡಾ ಆಶಾಲತಾ ಎಂ ಎನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಜವರೇಗೌಡ ಕೆ ಬಿ, ಜಿಲ್ಲಾ ಅಬಕಾರಿ ಉಪ ಆಯುಕ್ತ ಡಾ. ಮಹದೇವಿಬಾಯಿ,ಮನರೋಗ ತಜ್ಞ ಡಾ. ಶಶಾಂಕ್ ಎಚ್.ವಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.