Friday, September 20, 2024

ಪ್ರಾಯೋಗಿಕ ಆವೃತ್ತಿ

ಅಗತ್ಯ ವಸ್ತುಗಳ ಬೆಲೆ ಹೆಚ್ಚಳವೇ ಬಿಜೆಪಿ ಸೋಲಿಗೆ ಕಾರಣ – ಅಶೋಕ್ ಜಯರಾಂ

ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಹೆಚ್ಚಳವೇ ಬಿಜೆಪಿ ಸೋಲಿಗೆ ಕಾರಣವೆಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅಶೋಕ್ ಜಯರಾಂ ಹೇಳಿದರು.

ಮಂಡ್ಯ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಗ್ಯಾರೆಂಟಿ ಕಾರ್ಡ್ ನ ಭರವಸೆ ಹಾಗೂ ಗ್ರಾಮೀಣ ಜನರ ಮನ ಮುಟ್ಟುವಲ್ಲಿ ನಮ್ಮ ವೈಫಲ್ಯದಿಂದಾಗಿ ಬಿಜೆಪಿ ಸೋಲು ಅನುಭವಿಸ ಬೇಕಾಯಿತು. ಗ್ರಾಮೀಣ ಭಾಗದ ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲವಾಗಿದ್ದೇವೆ. ಕಾಂಗ್ರೆಸ್‌ನ ಗ್ಯಾರೆಂಟಿಯಲ್ಲಿ ಐದು ವಿಚಾರಗಳು ಜನರಿಗೆ ಹತ್ತಿರವಾದವು. ನಮ್ಮ ಪ್ರಣಾಳಿಕೆ ಸಹ ತಡವಾಗಿ ಹೊರಬಂದಿತ್ತು. ಇದು ನಮ್ಮ ಸೋಲಿಗೆ ಕಾರಣವಾಗಿದೆ ಎಂದು ಹೇಳಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ನಾವು ಪ್ರಚಾರಕ್ಕೆ ಹೋದ ವೇಳೆ ಜನತೆ ಅಡುಗೆ ಅನಿಲ ಹೆಚ್ಚಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಮಾತನಾಡಿದ್ದರು. ಇದೂ ಸಹ ಇದು ಸಹ ಒಂದು ಕಾರಣವಾಗಿದೆ. ಆದರೆ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಮತ ಗಳಿಕೆಯನ್ನು ಪಡೆದುಕೊಂಡಿದೆ. ಅದು ಸಮಾಧಾನಕರವಾಗಿದೆ ಎಂದು ತಿಳಿಸಿದರು.

ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗಿಂತ ಈ ಬಾರಿ ಒಂದೂವರೆ ಸಾವಿರ ಮತಗಳು ಕಡಿಮೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಮೂಲ ಮತ್ತು ವಲಸಿಗ ಕಾರ‌್ಯಕರ್ತರ ಸಮನ್ವಯತೆಯೂ ಒಂದಾಗಿರಬಹುದು. ಎರಡು ಬಾರಿ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದೇವೆ. ಆದರೂ ನಮ್ಮ ಕೈ ಹಿಡಿಯುವಲ್ಲಿ ಜನರು ಆಸಕ್ತಿ ವಹಿಸದಿರುವುದು ನಮ್ಮ ವೈಫಲ್ಯವೇ ಹೊರತು ಬೇರೆಯವರ ಮೇಲೆ ಹೊಣೆ ಹೊರಿಸುವುದು ಸಮಂಜಸವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಜಿಲ್ಲಾ ಕಚೇರಿ ಕಾರ್ಯದರ್ಶಿ ಹರ್ಷ, ನಗರಾಧ್ಯಕ್ಷ ವಿವೇಕ್, ನಗರಸಭೆ ಮಾಜಿ ಸದಸ್ಯ ಚಂದ್ರು, ಭೀಮೇಶ್, ಸತೀಶ್ ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!