Friday, September 20, 2024

ಪ್ರಾಯೋಗಿಕ ಆವೃತ್ತಿ

ಉಡುಪಿ ಕೊಲೆ ಪ್ರಕರಣ| ಮಹಜರು ವೇಳೆ ಆರೋಪಿ ಮೇಲೆ ಹಲ್ಲೆಗೆ ಯತ್ನ: ಲಾಠಿಚಾರ್ಜ್

ಉಡುಪಿಯ ನೇಜಾರಿನಲ್ಲಿ ನಡೆದ ತಾಯಿ ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ಭಾಗವಾಗಿ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಮಹಜರಿಗೆ ಕರೆದುಕೊಂಡು ಹೋದಾಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು, ಈ ವೇಳೆ ಪೊಲೀಸರು ಲಾಠಿಚಾರ್ಜ್‌ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ತಾಯಿ-ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39)ಯನ್ನು ಪೊಲೀಸರು ಸ್ಥಳ ಮಹಜರು ನಡೆಸಲು ತೃಪ್ತಿ ಲೇಔಟ್‌ನ ಕೃತ್ಯ ನಡೆದ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಈ ವೇಳೆ ಸ್ಥಳದಲ್ಲಿ ಸೇರಿದ್ದ ಆಕ್ರೋಶಿತರ ಗುಂಪು ಆರೋಪಿಗೆ ಹಲ್ಲೆ ನಡೆಸಲು ಮುಂದಾಗಿದ್ದು ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಆತನಿಗೆ ಬದುಕುವ ಹಕ್ಕು ಇಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮಹಜರು ಪ್ರಕ್ರಿಯೆ ಮುಗಿಸಿ ಆರೋಪಿಯನ್ನು ವಾಪಾಸ್ಸು ಕರೆದುಕೊಂಡು ಹೋಗುವ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಜನರು ಆರೋಪಿಯ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಜನರು ಲಾಠಿಚಾರ್ಜ್ ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಭಾನುವಾರ ಉಡುಪಿ ಸಮೀಪದ ನೇಜಾರು ಬಳಿಯ ತೃಪ್ತಿ ಲೇಜೌಟ್‌ನಲ್ಲಿ ಮನೆಯೊಂದಕ್ಕೆ ನುಗ್ಗಿ ದುಷ್ಕರ್ಮಿ ತಾಯಿ ಹಸೀನಾ ಹಾಗೂ ಮೂವರು ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಆಸೀಮ್‌ನ್ನು (12) ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾನೆ. ಈ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಆರೋಪಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಕುರಿತು ತನಿಖೆಗೆ ಪೊಲೀಸರ 5 ತಂಡಗಳನ್ನು ರಚಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಅರುಣ್ ಚೌಗಲೆ(35)ಯನ್ನು ನಿನ್ನೆ ಮೊಬೈಲ್ ಟವರ್ ಆಧರಿಸಿ ಕುಡಚಿಯಲ್ಲಿ ಬಂಧಿಸಲಾಗಿತ್ತು. ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಉಡುಪಿ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಉಡುಪಿ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗೆ ನ್ಯಾಯಾಲಯ 14 ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!