Monday, May 13, 2024

ಪ್ರಾಯೋಗಿಕ ಆವೃತ್ತಿ

ಬೀದಿಗೆ ಬಂದ ಬಿಜೆಪಿ ಜಗಳ| ಯತ್ನಾಳ್ ಹುಚ್ಚುನಾಯಿ ಇದ್ದಂತೆ ಎಂದ ರೇಣುಕಾಚಾರ್ಯ

ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಸ್ವಪಕ್ಷದವರ ವಿರುದ್ಧವೇ ಹೇಳಿಕೆ ನೀಡುತ್ತಿರುವ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, “ಯತ್ನಾಳ್ ಹುಚ್ಚು ನಾಯಿ ಇದ್ದಂತೆ” ಎಂದು ನಿಂದಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಹೊನ್ನಾಳಿಯ ಮಾಜಿ ಶಾಸಕ, “ಯತ್ನಾಳ್‌ ಬಗ್ಗೆ  ಮಾತನಾಡುವುದಕ್ಕೂ ಅಸಹ್ಯ ಎನಿಸುತ್ತದೆ. ಆತನ ಬಗ್ಗೆ ಗೌರವವಿತ್ತು. ಇನ್ನು ಮುಂದೆ ಆ ಗೌರವ ಇರಲ್ಲ. ಆತ ಒಂದು ಹುಚ್ಚು ನಾಯಿ ಇದ್ದಂತೆ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಆನೆ ಬೀದಿಗೆ ಇಳಿದಾಗ ಹುಚ್ಚು ನಾಯಿ ಬೊಗಳುತ್ತದೆ. ಆದರೆ ಆನೆಗೆ ಇರುವ ಗೌರವ ಕಡಿಮೆಯಾಗುತ್ತಾ?” ಎಂದು ಪ್ರಶ್ನಿಸಿದ ಅವರು, “ನಾಯಿಗೆ ಇರುವ ನಿಯತ್ತು ಆ ಮನುಷ್ಯನಿಗೆ ಇಲ್ಲ. ಜೆಡಿಎಸ್‌ಗೆ ಹೋದವರನ್ನು ಕರೆತಂದಿದ್ದು ಯಡಿಯೂರಪ್ಪ. ಆದರೆ ಆ ಮನುಷ್ಯನಿಗೆ ನೀಯತ್ತು ಅನ್ನೋದೇ ಇಲ್ಲ” ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

“ವಿಜಯೇಂದ್ರ, ಯಡಿಯೂರಪ್ಪ ಅವರನ್ನು ಟೀಕೆ ಮಾಡಿದರೆ, ಮೋದಿ ಮತ್ತು ಕೇಂದ್ರದ ವರಿಷ್ಠರನ್ನು ಟೀಕೆ ಮಾಡಿದಂತೆ‌. ಯಡಿಯೂರಪ್ಪ ಆನೆ ಇದ್ದಂತೆ, ಅವರ ಬಗ್ಗೆ ಮಾತನಾಡುವವರು ಹುಚ್ಚು ನಾಯಿ. ಹುಚ್ಚು ನಾಯಿ ಬಗ್ಗೆ ಮಾತನಾಡುವುದು ಕೂಡ ಬೇಡ. ಆ ಹುಚ್ಚು ನಾಯಿ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೇನೆ” ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

“ಸೋಮಣ್ಣ ಸೋಲಿಗೆ ವಿಜಯೇಂದ್ರ ಕಾರಣ ಎಂದು ಹೇಳುತ್ತಾರೆ. ಸೋಮಣ್ಣ ಸೋಲಲು ವಿಜಯೇಂದ್ರ ಕಾರಣನಾ? ಶಿಕಾರಿಪುರದಲ್ಲಿ ಅವರನ್ನು ಸೋಲಿಸಲು ಕುತಂತ್ರ ಮಾಡಿದವರು ಇಂಥವರೇ. ಗೆದ್ದರೆ ಮಹಾನ್ ನಾಯಕನಾಗುತ್ತಾನೆ ಎಂದು ಸೋಲಿಸಲು ಕುತಂತ್ರ ಮಾಡಿದ್ದರು. 2018ರಲ್ಲಿ ಸರ್ಕಾರ ಮಾಡಿದಾಗ ಸಚಿವ ಸ್ಥಾನ ಕೊಡಲಿಲ್ಲ ಎಂದು ಯತ್ನಾಳ್ ಈ ರೀತಿ ಮಾಡುತ್ತಿದ್ದಾರೆ. ಯಾವ ಸೀನಿಯಾರಿಟಿ ಇದೆ? ಬೊಗಳೋದೆ ಸೀನಿಯಾರಿಟಿನಾ? ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಬೊಗಳೋಕೆ ಬಿಟ್ಟವರು ಯಾರು” ಎಂದು ಪ್ರಶ್ನಿಸಿದರು.

“ವಿಜಯೇಂದ್ರ, ಯಡಿಯೂರಪ್ಪ ಅವರ ವಿರುದ್ಧ ಯಾರು ಯತ್ನಾಳ್ ಅವರಿಗೆ ಬೊಗಳು ಅಂತ ಹೇಳಿದ್ದಾರೆ. ಇವರಿಗೆ ಯಾರು ಈ ರೀತಿ ಬೊಗಳು ಅಂತ ಹೇಳಿಕೊಟ್ಟಿದ್ದಾರೆ ಎಂಬುದನ್ನು ಕೂಡ ಬಹಿರಂಗವಾಗಿ ಹೇಳಲಿ” ಎಂದು ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಮುರುಗೇಶ್ ನಿರಾಣಿಯವರು ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ನಿನ್ನೆ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಯತ್ನಾಳ್, “ವಿಜಯೇಂದ್ರ ಕೆಲವೊಂದು ಕಡೆ ಬೀದಿನಾಯಿ, ಹಂದಿಗಳನ್ನು ಬಿಟ್ಟಿದ್ದಾರೆ. ಅಂತಹ ಬೀದಿ ನಾಯಿಗಳ ಬಗ್ಗೆ ನಾನು ಉತ್ತರ ಕೊಡಲ್ಲ. ಹಾಗೆಯೇ ಒದರುತ್ತಾ ಇರುತ್ತದೆ. ಅವುಗಳ ಬಗ್ಗೆ ಕೇಳಬೇಡಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧವೇ ನೇರ ವಾಗ್ದಾಳಿ ನಡೆಸಿದ್ದರು.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!