Friday, September 20, 2024

ಪ್ರಾಯೋಗಿಕ ಆವೃತ್ತಿ

ಚಿಕ್ಕಮಗಳೂರು| ಯುವ ವಕೀಲನ ಮೇಲೆ ಹಲ್ಲೆ; ಪಿಎಸ್‌ಐ ಸೇರಿ 6 ಪೊಲೀಸರ ಸಸ್ಪೆಂಡ್

ಹೆಲ್ಮೆಟ್ ವಿಚಾರವಾಗಿ ಯುವ ವಕೀಲನ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪಿಎಸ್​ಐ ಮಹೇಶ್ ಪೂಜಾರಿ ಸೇರಿದಂತೆ ಆರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್​ಪಿ ವಿಕ್ರಂ ಅಮ್ಟೆ ಆದೇಶಿಸಿದ್ದಾರೆ.

ಪ್ರೀತಂ ಪೊಲೀಸರಿಂದ ಹಲ್ಲೆಗೊಳಗಾದ ಯುವ ವಕೀಲ. ಇವರು ಗುರುವಾರ ರಾತ್ರಿ ಚಿಕ್ಕಮಗಳೂರು ನಗರದ ಮಾರುಕಟ್ಟೆ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಓಡಿಸುತ್ತಿದ್ದರು. ಈ ವೇಳೆ ಠಾಣೆಯ ಮುಂದೆ ಅಡ್ಡಗಟ್ಟಿದ ಪೊಲೀಸರು ದ್ವಿಚಕ್ರ ವಾಹನದ ಕೀ ಕಸಿದುಕೊಂಡಿದ್ದಾರೆ.

ಈ ವೇಳೆ, “ಹೆಲ್ಮೆಟ್ ಧರಿಸದ್ದಕ್ಕೆ ದಂಡ ಕಟ್ಟುತ್ತೇನೆ. ಆದರೆ, ಕೀ ಕಸಿದುಕೊಳ್ಳಲು ನಿಮಗೆ ಅಧಿಕಾರ ಕೊಟ್ಟವರು ಯಾರು?” ಎಂದು ವಕೀಲ ಪ್ರೀತಂ ಪ್ರಶ್ನಿಸಿದ್ದಾರೆ. ಅಲ್ಲದೆ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ಪೊಲೀಸರು ಪ್ರೀತಂ ಅವರನ್ನು ಠಾಣೆಯ ಒಳಗಡೆ ಕರೆದೊಯ್ದು ಕಂಪ್ಯೂಟರ್ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ದೊಣ್ಣೆ, ಲಾಠಿ, ಪೈಪ್ ನಿಂದ ಮನ ಬಂದಂತೆ ಥಳಿಸಿದ್ದಾರೆ. ಅಲ್ಲದೆ ಬೂಟುಗಾಲಿನಿಂದ ಪ್ರೀತಂ ಅವರಿಗೆ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರ ಹಲ್ಲೆಯಿಂದ ಪ್ರೀತಂ ಅವರ ಎದೆ, ಬೆನ್ನು, ಕೈಗೆ ಗಾಯಗಳಾಗಿವೆ. ಪೊಲೀಸ್ ದೌರ್ಜನ್ಯದ ವಿಷಯ ತಿಳಿದು ಠಾಣೆ ಮುಂದೆ ಜಮಾಯಿಸಿದ ವಕೀಲರು, ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ರಾತ್ರಿಯಿಡೀ ಠಾಣೆಯ ಮುಂದೆ ಧರಣಿ ನಡೆಸಿದ್ದರು. ಸ್ಥಳಕ್ಕೆ ಬಂದ ಎಸ್‌ಪಿ ವಿಕ್ರಂ ವಕೀಲರ ಜೊತೆ ಮಾತುಕತೆ ನಡೆಸಿದ್ದರು.

ವರದಿಗಳ ಪ್ರಕಾರ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಸೇರಿದಂತೆ 6 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ದ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಘಟನೆಯ ಕುರಿತು ವರದಿ ನೀಡುವಂತೆ ಡಿವೈಎಸ್‌ಪಿಗೆ ಸೂಚಿಸಲಾಗಿದೆ ಎಂದು ಎಸ್‌ಪಿ ವಿಕ್ರಂ ಅಮ್ಟೆ ತಿಳಿಸಿದ್ದಾರೆ.

ಪೊಲೀಸ್ ದೌರ್ಜನ್ಯ ಖಂಡಿಸಿ ಇಂದು ಪ್ರತಿಭಟನೆಗೆ ಚಿಕ್ಕಮಗಳೂರು ಬಾರ್​​ ಕೌನ್ಸಿಲ್​ ಸದಸ್ಯರು ಸಿದ್ದತೆ ನಡೆಸಿದ್ದಾರೆ. ಗಾಯಗೊಂಡ ವಕೀಲ ಪ್ರೀತಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!