Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಅಂಗಡಿ ಮಳಿಗೆ ಖಾಲಿ ಮಾಡಿಸಿ ದೌರ್ಜನ್ಯ: ನೊಂದ ಕುಟುಂಬದ ಪ್ರತಿಭಟನೆ

ಲೋಕಾಯುಕ್ತರು ಮತ್ತು ಶಾಸಕರಿಗೂ ಕಿಮ್ಮತ್ತು ನೀಡದೆ ಪೊಲೀಸರ ಕುಮ್ಮಕ್ಕಿನಿಂದ ಗೂಂಡಾಗಳ ಮೂಲಕ ಮದ್ದೂರು ತಾಲೂಕು ಪಂಚಾಯಿತಿ ಮಳಿಗೆಯನ್ನು ಬಲವಂತವಾಗಿ ಖಾಲಿ ಮಾಡಿಸಿ ದೌರ್ಜನ್ಯ ಮಾಡಲಾಗಿದೆ ಎಂದು ನೊಂದ ಕುಟುಂಬವೊಂದು ಮಂಡ್ಯ ಜಿಲ್ಲಾ ಪಂಚಾಯತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು.

ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಗ್ರಾಮದ ಚೆನ್ನಯ್ಯರ ಮಗ ರಾಚಯ್ಯ ಎಂ.ಸಿ ಕುಟುಂಬದ ಜೊತೆಗೂಡಿನುದ ಧರಣಿ ನಡೆಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮದ್ದೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಕೆಲ ಪಟ್ಟಭದ್ರರು ಕಾನೂನು ಬಾಹಿರವಾಗಿ ಅಕ್ರಮ ಮಾರ್ಗದಿಂದ ಎರಡು ಅಂಗಡಿಗಳನ್ನು ಬಾಡಿಗೆ ಪಡೆದುಕೊಂಡು, ಮತ್ತೆ ಅದೇ ಮಳಿಗೆಗಳನ್ನು ಅತಿ ಹೆಚ್ಚು ಹಣಕ್ಕೆ ಉಪ ಬಾಡಿಗೆ ನೀಡಿರುತ್ತಾರೆ, ಇದರಲ್ಲಿ ಕೈಲಾಸನಾಥ್ ಎಂಬಾತ ಅಂಗಡಿ ಮಳಿಗೆಗಳು ನನ್ನ ಸ್ವಂತದ್ದಾಗಿದೆ ಎಂದೇಳಿ ಮಾಸಿಕ 8,000 ರೂಗೆ ಉಪ ಬಾಡಿಗೆ ನೀಡಿದ್ದನು, ಮುಂಗಡ ಹಣವಾಗಿ 50 ಸಾವಿರ ನೀಡಲಾಗಿತ್ತು, ಪ್ರತಿ ತಿಂಗಳ ಬಾಡಿಗೆ ಹಣವನ್ನು ಫೋನ್ ಪೇ ಮೂಲಕ ಪಾವತಿ ಮಾಡುತ್ತಾ ಬಂದಿದ್ದೆ ಎಂದು ನೊಂದ ರಾಚಯ್ಯ ತಿಳಿಸಿದರು.

ಹಲವು ತಿಂಗಳ ನಂತರ ನನಗೆ ಬಾಡಿಗೆ ಸಾಕಾಗಲ್ಲ, 12 ಸಾವಿರ ಬಾಡಿಗೆ ಕೊಡುವವರು ಇದ್ದಾರೆ ಮಳಿಗೆ ಖಾಲಿ ಮಾಡು ಎಂದು ಕೈಲಾಸನಾಥ್ ಒತ್ತಡ ಹಾಕಿದಾಗ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೆ, ವಿಚಾರಣೆ ಮಾಡಿದ ಅವರು ಕೈಲಾಸನಾಥ್ ಗೆ ನೀಡಿರುವ ಪರವಾನಗಿ ರದ್ದುಪಡಿಸಿ ಎಂದು ತಾಲೂಕು ಪಂಚಾಯಿತಿಗೆ ಪತ್ರ ರವಾನಿಸಿದ್ದರು. ಅದರಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿದ್ದರು, ಆದರೆ ಕೈಲಾಸನಾಥ್ ಮದ್ದೂರು ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ವಿನಾಕಾರಣ ದೂರು ದಾಖಲು ಮಾಡಿದ್ದು, ಪೋಲಿಸ್ ಆರಕ್ಷಕ ಶಿವಕುಮಾರ್ ನನ್ನನ್ನು ಠಾಣೆಗೆ ಕರೆಯಿಸಿ ಮಳಿಗೆ ಖಾಲಿ ಮಾಡಲು ಸೂಚಿಸಿದ್ದು, ಭಯ ಬೀತನಾಗಿ ಕಾಲಾವಕಾಶ ಕೋರಿದಾಗ ಆಗಸ್ಟ್ 10ರೊಳಗೆ ಖಾಲಿ ಮಾಡುವಂತೆ ಎಚ್ಚರಿಸಿದ್ದರು.

ಇದರಿಂದ ಮನನೊಂದು ಶಾಸಕ ಕದಲೂರು ಉದಯ್ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದಾಗ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ರಾಚಯ್ಯನಿಗೆ ಮಳಿಗೆಯ ಪರವಾನಗಿ ನೀಡುವಂತೆ ಸೂಚಿಸಿದ್ದರು. ಆದರೆ ಕೈಲಾಸನಾಥ್ ಗೂಂಡಾಗಳ ಜೊತೆಗೂಡಿ ಅಂಗಡಿ ಬೀಗ ಹೊಡೆದು ಅಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ಬೇಕಾಬಿಟ್ಟಿ ಲಗೇಜ್ ಆಟೋಗೆ ತುಂಬಿಸಿ ಮಳೆಯಲ್ಲಿ ನೆನೆಸಿದ್ದಾರೆ ಎಂದು ದೂರಿದರು.

ದೌರ್ಜನ್ಯ ಪ್ರಕರಣದಿಂದ ಅವಮಾನಿತನಾಗಿದ್ದು, ಇದರ ವಿರುದ್ಧ ಕಾನೂನು ಕ್ರಮ ವಹಿಸಿ ಕರ್ತವ್ಯ ಲೋಪ ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಮಳಿಗೆಯಲ್ಲಿ ವ್ಯಾಪಾರ ಮುಂದುವರಿಸಲು ಅವಕಾಶ ಮಾಡಿಕೊಟ್ಟು ಜೀವನೋಪಾಯ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!