ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ 9 ಆರೋಪಿಗಳನ್ನು ಬಂಧಿಸಿ ಪಣಕ್ಕೆ ಇಟ್ಟಿದ ₹ 1,37,810 ಹಣವನ್ನು ವಶಕ್ಕೆ ಪಡೆದಿರುವ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಭಾನುವಾರ ರಾತ್ರಿ 11 ಗಂಟೆ ಸಮಯದಲ್ಲಿ ಹೇಮಾವತಿ ಕಾಲುವೆ ಏರಿಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಮಶಾಣದಲ್ಲಿ ಸುಮಾರು 10 ಮಂದಿ ಹಲವು ಊರುಗಳಿಂದ ಬಂದು ಅಂದರ್, ಬಾಹರ್ ಜೂಜು ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಲಾಯಿತು.
ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಮಧು, ನಾಗರಾಜು, ಪ್ರಶಾಂತ್ ಕುಮಾರ್, ರೇವಣ್ಣ, ಪಿ.ಚಂದ್ರಶೇಖರ, ಪ್ರಕಾಶ, ವಿರೂಪಾಕ್ಷರ ಸಮ್ಮುಖದಲ್ಲಿ ದಾಳಿ ನಡೆಸಲಾಯಿತು. ಪೊಲೀಸರನ್ನು ನೋಡಿದ ಹಲವು ಆರೋಪಿಗಳು ಅಲ್ಲಿಂದ ಓಡಿ ಹೋದರು, ಆದರೆ 9 ಮಂದಿ ಜೂಜುಕೋರರನ್ನು ಬಂಧಿಸಿ, ಅವರು ಪಣಕಿಟ್ಟಿದ್ದ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.




