ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಸುಮಾರು 15ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ 24/7 ಹೈಟೆಕ್ ಸಮುದಾಯ ಆರೋಗ್ಯ ಆಸ್ಪತ್ರೆಯನ್ನು ಮುಚ್ಚಿ, ಸಾಮಾನ್ಯ ಆರೋಗ್ಯವನ್ನಾಗಿ ಕೆಳದರ್ಜೆಗೆ ಇಳಿಸಿ ಶಿಫಾರಸ್ಸು ಮಾಡಿರುವ ರಾಜ್ಯ ಸರ್ಕಾರ ಹಾಗೂ ಅರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ವಿರುದ್ದ ಬೂಕನಕೆರೆ ನಾಗರೀಕ ಹಿತರಕ್ಷಣಾ ಸಮಿತಿ ಮಂಗಳವಾರ ಬಂದ್ ನಡೆಸಿ ಬೃಹತ್ ಪ್ರತಿಭಟನೆ ನಡೆಸಿತು.
ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬೂಕನಕೆರೆ ಸಂಪೂರ್ಣ ಬಂದ್ ನಡೆಸಿ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಹರ್ಷಗುಪ್ತ ಅವರ ಗ್ರಾಮೀಣ ಜನ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಹರ್ಷಗುಪ್ತ ಅವರ ಭೂತದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯು ಸೇವಾ ಕ್ಷೇತ್ರ ಎಂಬುದನ್ನು ಮರೆತು, ಆಧಾಯ ತರುವ ಕ್ಷೇತ್ರವೆಂದು ತಿಳಿದಿರುವ ಹರ್ಷಗುಪ್ತ ಅವರು ನಗರ ಪ್ರದೇಶದ ಹೆರಿಗೆ ಆಸ್ಪತ್ರೆಗಳ ಲಾಭಿ, ಮೆಡಿಕಲ್ ಲಾಭಿ, ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿದು ನೂರಾರು ಕೋಟಿ ಕಿಕ್‌ಬ್ಯಾಕ್ ಪಡೆದುಕೊಂಡು ಗ್ರಾಮೀಣ ಜನರ ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದ 24/7 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 241ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ.ರಾಜೇಗೌಡ, ಬೂಕನಕೆರೆ ಹೈಟೆಕ್ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಜ್ಞಾನಸಿಂಧು, ಅಂಗಡಿ ನಾಗರಾಜು, ಬೂಕನಕೆರೆ ಗ್ರಾ.ಪಂ.ಅಧ್ಯಕ್ಷ ಶ್ಯಾಂಪ್ರಸಾದ್, ಮೀನಾಕ್ಷಿಪುಟ್ಟರಾಜು, ಹೆಳವೇಗೌಡ (ಹುಲ್ಲೇಗೌಡ), ಬಿ.ಜವರಾಯಿಗೌಡ, ಗ್ರಾ.ಪಂ.ಸದಸ್ಯೆ ರಾಜೇಶ್ವರಿ, ಮುಖಂಡರಾದ ಬಿ.ಎಸ್. ಮಹೇಶ್ ಅಡಿಕೆಸ್ವಾಮೀಗೌಡ, ಬೂಕನಕೆರೆ ಮಧುಸೂಧನ್, ಶಂಭುಲಿಂಗಶೆಟ್ಟಿ, ಬಿ.ಬಾಚಹಳ್ಳಿ ಪ್ರಸನ್ನ, ಕಾರಿಗನಹಳ್ಳಿ ಪುಟ್ಟೇಗೌಡ, ಮರುವನಹಳ್ಳಿ ಶಂಕರ್, ಬಿ.ನಾಗೇಶ್, ಚೋಕನಹಳ್ಳಿ ಪ್ರಕಾಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪ್ರತಿಭಟನೆಯ ನಂತರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀನಿವಾಸಗೌಡ ಹಾಗೂ ನಾಡಕಚೇರಿಯ ಅಧಿಕಾರಿಗಳು, ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.




