ಹಳೇ ಮೈಸೂರು ಭಾಗದ ರೈತರ ಜೀವನಾಡಿ ಕೆ ಆರ್ ಎಸ್ ಹಿನ್ನೀರು ಪ್ರದೇಶದಲ್ಲಿ ವಿಮಾನಯಾನ ಯೋಜನೆ ಕೈಗೊಳ್ಳವುದನ್ನು ಮಂಡ್ಯ ಜಿಲ್ಲಾ ಹಿತರಕ್ಷಣಾ ಇಲಾಖೆಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ತೀವ್ರವಾಗಿ ವಿರೋಧಿಸಿದ್ದಾರೆ.
ಕೆ.ಆರ್.ಎಸ್ ಹಿನ್ನೀರಿನಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ವಾಟರ್ ಸ್ಪೋರ್ಟ್ಸ್, ವಿಮಾನಯಾನ ಯೋಜನೆ ಕೈಗೊಳ್ಳುವುದು., ಅಣೆಕಟ್ಟೆಯ ನೀರಿನ ವಿಶಾಲ ಪ್ರದೇಶಕ್ಕೆ ಮಾರಕವಾಗುತ್ತದೆ. ಜಲಾಶಯದ ಮೀನು ಕೃಷಿ ವ್ಯವಸ್ಥೆಗೆ ಅಡಚಣೆಯಾಗುತ್ತದೆ. ಪಕ್ಷಿಗಳ ವಿಹಾರಕ್ಕೆ ತೊಂದರೆಯಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಜಲಾಶಯದ ಪ್ರದೇಶದಲ್ಲಿ ಉತ್ತಮ ಆಮ್ಲಜನಕ ಉತ್ಪಾದನೆಯಾಗುತ್ತಿದ್ದು, ಈ ಯೋಜನೆಯಿಂದ ಅಣೆಕಟ್ಟೆ ಪ್ರದೇಶದಲ್ಲಿ ಕಂಪನ ಉಂಟಾಗಿ ಅಣೆಕಟ್ಟೆ ಭದ್ರತೆಗೆ ಧಕ್ಕೆ ಆಗುತ್ತದೆ. ಅಣೆಕಟ್ಟೆಯು ನಿಷೇಧಿತ ಪ್ರದೇಶವಾಗಿದ್ದು ಯಾವುದೇ ರೀತಿಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪ್ರವೇಶ ಇರುವುದಿಲ್ಲ, ಅಣೆಕಟ್ಟೆ ಪ್ರದೇಶದಲ್ಲಿ ಅಮ್ಯೂಸ್ಟ್ಮೆಂಟ್ ಪಾರ್ಕ್ ನಿರ್ಮಾಣ, ಹಿನ್ನಿರಿನಲ್ಲಿ ಜಲ ಕ್ರೀಡೆ ವಿಮಾನ ಯೋಜನೆ, ಅಣೆಕಟ್ಟೆಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳವುದು, ಮಂಡ್ಯ ಜಿಲ್ಲೆಯ ರೈತರಿಗೆ ಮಾರಕ ಯೋಜನೆಗಳಾಗಿದ್ದು, ಇಂತಹ ಅಪಾಯಕಾರಿ ಯೋಜನೆಗಳನ್ನು ಕೈಬಿಡಬೇಕೆಂದು ಎಚ್ಚರಿಸಿದ್ದಾರೆ.
ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣದಿಂದ ಸಂಬಂಧಿಸಿದಂತೆ ಅಣೆಕಟ್ಟೆಗೆ, ಪರಿಸರಕ್ಕೆ, ರೈತರಿಗೆ, ಅಣೆಕಟ್ಟಿನ ವ್ಯಾಪ್ತಿ ಗ್ರಾಮಗಳಿಗೆ ಧಕ್ಕೆಯಾಗುವುದರ ಜೊತೆಗೆ ಗ್ರಾಮಗಳ ಪರಿಸರ, ಕೃಷಿ ಬದುಕು ಪಲ್ಲಾಟವಾಗುತ್ತದೆ. ಈ ಯೋಜನೆಯು ಕೆ.ಆರ್.ಎಸ್. ಪ್ರದೇಶದ ಯುವ ಸಮೂಹಗಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 120 ವರ್ಷಗಳ ಅಣೆಕಟ್ಟಿನ ಭದ್ರತೆಗೆ ನೇರ ಪರಿಣಾಮವಾಗುತ್ತದೆ. ಕೃಷಿ ಬದುಕು ನಾಶವಾಗುತ್ತದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಅನೇಕ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಣೆಕಟ್ಟಿನ ಬಳಿ ಯಾವುದೇ ದಟ್ಟಣೆಯ ಸಾರ್ವಜನಿಕ ಚಟುವಟಿಕೆಗಳು ನಡೆಯಬಾರದು. ದಟ್ಟಣೆಯ ವಾಹನಗಳ ಪ್ರವೇಶದಿಂದ ಅಮ್ಲಜನಕ ಉತ್ಪಾದನೆಗೆ ತಡೆಯಾಗುತ್ತದೆ. ಹಸಿರು ವಲಯ ನಾಶವಾಗುತ್ತದೆ. ಈ ಸಂಬಂಧ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಯೋಜನೆಯನ್ನು ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದಾರೆ.




