Thursday, September 19, 2024

ಪ್ರಾಯೋಗಿಕ ಆವೃತ್ತಿ

ಡೆಪ್ಯುಟಿ ಸ್ಪೀಕರ್ ಚುನಾವಣೆಗೆ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಅಯೋಧ್ಯೆ ಸಂಸದ

ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಲೋಕಸಭೆಯ ಡೆಪ್ಯುಟಿ ಸ್ಪೀಕರ್‌ ಚುನಾವಣೆಗೆ ಸಮಾಜವಾದಿ ಪಕ್ಷದ ಸಂಸದ ಅವದೇಶ್‌ ಪ್ರಸಾದ್‌ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಇದರೊಂದಿಗೆ ಡೆಪ್ಯುಟಿ ಸ್ಪೀಕರ್‌ ಚುನಾವಣೆಯಲ್ಲಿ ಕೂಡ ಆಡಳಿತ ಪಕ್ಷಕ್ಕೆ ಸೆಡ್ಡು ಹೊಡೆಯಲು ವಿಪಕ್ಷಗಳು ನಿರ್ಧರಿಸಿವೆ. ಅವದೇಶ್ ಅವರು ಅಯೋಧ್ಯೆಯಿರುವ ಫೈಜಾಬಾದ್‌ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ಇಲ್ಲಿಯವರೆಗೂ ಆಡಳಿತ ಪಕ್ಷ ಡೆಪ್ಯುಟಿ ಸ್ಪೀಕರ್‌ ಚುನಾವಣೆಗೆ ಯಾವುದೇ ಹೆಸರನ್ನು ಸೂಚಿಸಿಲ್ಲ. 17ನೇ ಲೋಕಸಭೆ ಚುನಾವಣೆ 2019ರಿಂದಲೂ ಈ ಹುದ್ದೆ ಖಾಲಿಯಿದೆ. ಈ ಹುದ್ದೆಯನ್ನು ವಿಪಕ್ಷಗಳಿಗೆ ಬಿಟ್ಟುಕೊಡುವ ಯಾವುದೇ ಸುಳಿವನ್ನು ಎನ್‌ಡಿಎ ಸರ್ಕಾರ ನೀಡಿಲ್ಲ. ಆದರೆ ಸರ್ಕಾರದ ನಿರ್ಧಾರದ ಮೇಲೆ ವಿಪಕ್ಷಗಳು ಮುಂದಿನ ಕಾರ್ಯತಂತ್ರ ನಡೆಸಲಿವೆ ಎನ್ನಲಾಗಿದೆ.

ಡೆಪ್ಯುಟಿ ಸ್ಪೀಕರ್‌ ಹುದ್ದೆಯನ್ನು ವಿಪಕ್ಷಗಳಿಗೆ ನೀಡಲು ಯಾವುದೇ ಒಮ್ಮತ ಮೂಡದ ಕಾರಣ ಇಂಡಿಯಾ ಒಕ್ಕೂಟದ ವಿಪಕ್ಷಗಳು ಸ್ಪೀಕರ್‌ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ಮೂಲಗಳ ಪ್ರಕಾರ ಪ್ರಸ್ತುತ ಅಧಿವೇಶನದಲ್ಲಿಯೇ ಡೆಪ್ಯುಟಿ ಸ್ಪೀಕರ್ ಚುನಾವಣೆ ನಡೆಯಲಿದೆ.

ವಿಪಕ್ಷಗಳ ಲೋಕಸಭೆಯ ನಾಯಕರಾದ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಟಿಎಂಸಿಯ ಅಭಿಷೇಕ್‌ ಬ್ಯಾನರ್ಜಿ ಅವರು ಔಪಚಾರಿಕ ಚರ್ಚೆ ನಡೆಸಿದ್ದು ಡೆಪ್ಯುಟಿ ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರೊಂದಿಗೆ ಬಲವಾದ ರಾಜಕೀಯ ಸಂದೇಶ ನೀಡಬೇಕೆಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದಲಿತ ಸಮುದಾಯದ ನಾಯಕರಾಗಿರುವ ಅವದೇಶ್‌ ಪ್ರಸಾದ್‌ ಅವರು ಫೈಜಾಬಾದ್‌ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರೂ ಅಯೋಧ್ಯೆಯ ಸಂಸದರೆಂದು ಪರಿಚಿತರಾಗಿದ್ದಾರೆ. ಇವರ ಹೆಸರನ್ನು ಸೂಚಿಸಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥರಾದ ಮಮತಾ ಬ್ಯಾನರ್ಜಿ ಎಂದು ಮೂಲಗಳು ತಿಳಿಸಿವೆ.

ಅವದೇಶ್‌ ಪ್ರಸಾದ್‌ ಅವರು ರಾಮ ಮಂದಿರವಿರುವ ಅಯೋಧ್ಯೆಯಲ್ಲಿ ಬಿಜೆಪಿಯ ಹಾಲಿ ಸಂಸದ ಲಲ್ಲು ಸಿಂಗ್‌ ಅವರನ್ನು 54,567 ಮತಗಳಿಂದ ಸೋಲಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!