Thursday, October 24, 2024

ಪ್ರಾಯೋಗಿಕ ಆವೃತ್ತಿ

ತನಿಖಾ ಸಂಸ್ಥೆಗಳ ದುರ್ಬಳಕೆ ವಿರೋಧಿಸಿ ನಾಳೆ ‘ಇಂಡಿಯಾ ಒಕ್ಕೂಟ’ದ ಪ್ರತಿಭಟನೆ

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ ಮತ್ತು ಇಡಿ ಅಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆ ಮೂಲಕ ವಿಪಕ್ಷಗಳನ್ನು ಹತ್ತಿಕ್ಕುವ ತಂತ್ರ ನಡೆಸುತ್ತಿದ್ದಾರೆ ಎಂಬ ಆರೋಪ ಕೆಲವು ವರ್ಷಗಳಿಂದ ಕೇಳಿಬರುತ್ತಿದೆ.

ಇದೀಗ, ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ವಿರುದ್ಧ ಇಂಡಿಯಾ ಒಕ್ಕೂಟದ ನಾಯಕರು ಜುಲೈ 1ರ ಸೋಮವಾರ ಸಂಸತ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ. ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಮೋದಿ ನಕಲಿ ಕೇಸ್ ಹಾಕುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಹಿಡಿದು ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕರವರೆಗೂ ಪ್ರತಿ ವಿರೋಧ ಪಕ್ಷದ ನಾಯಕರ ವಿರುದ್ಧ ಸಿಬಿಐ ಮತ್ತು ಇಡಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ತನಿಖೆ ನಡೆಸುತ್ತಿದೆ. ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿದ್ದಾರೆ. ಯಾರು ವಿರುದ್ಧವಾಗಿ ಮಾತನಾಡುತ್ತಾರೋ ಮತ್ತು ಬಿಜೆಪಿಗೆ ಸೇರಲು ನಿರಾಕರಿಸುತ್ತಾರೋ ಅವರ ವಿರುದ್ಧ ಇಡಿ ಮತ್ತು ಸಿಬಿಐ ದಾಳಿ ಮಾಡುತ್ತವೆ” ಎಂದು ಹೇಳಿದ್ದಾರೆ.

“ಮೋದಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ನಾಯಕರು ಬಿಜೆಪಿ ವಿರುದ್ಧ ಸಂಸತ್ತಿನ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ” ಎಂದು ಸಿಂಗ್ ಹೇಳಿದ್ದಾರೆ.

“ಸಿಬಿಐ ಮತ್ತು ಇಡಿ ಕೂಡ ಸುಪ್ರೀಂ ಕೋರ್ಟ್ ಅನ್ನು ದಾರಿ ತಪ್ಪಿಸುತ್ತಿವೆ. ರೂಸ್ ಅವೆನ್ಯೂ ಕೋರ್ಟ್ ತನ್ನ ಆದೇಶದಲ್ಲಿ ‘ಅರವಿಂದ್ ಕೇಜ್ರಿವಾಲ್ ವಿರುದ್ಧ ಇಡಿ ಯಾವುದೇ ಸಾಕ್ಷ್ಯವನ್ನು ಒದಗಿಸಿಲ್ಲ. ತನಿಖಾ ಸಂಸ್ಥೆಯು ದುರುದ್ದೇಶಪೂರಿತ ಉದ್ದೇಶದಿಂದ ಕೆಲಸ ಮಾಡುತ್ತಿದೆ’ ಎಂದು ಹೇಳಿದೆ. ಇಡಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಯಾವುದೇ ಹಣದ ಜಾಡನ್ನು ಪತ್ತೆ ಮಾಡಿಲ್ಲ. ಯಾವುದೇ ಪುರಾವೆಗಳನ್ನು ಕಲೆ ಹಾಕಿಲ್ಲ. ಅಲ್ಲದೆ, ಯಾವುದೇ ಅಕ್ರಮ ಹಣವನ್ನು ವಸೂಲಿ ಮಾಡಿಲ್ಲ. ಹಾಗಾಗಿ ಅರವಿಂದ್ ಕೇಜ್ರಿವಾಲ್ ನಿರಪರಾಧಿ” ಎಂದು ಸಿಂಗ್‌ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!