Friday, November 20, 2026

ಪ್ರಾಯೋಗಿಕ ಆವೃತ್ತಿ

”ಜಲಜೀವನ್ ಮಿಷನ್” ಬಿಜೆಪಿಗೆ “ಭ್ರಷ್ಟಾಚಾರದ ಮಿಷನ್” ಆಗಿತ್ತು ; ಪ್ರಿಯಾಂಕ್ ಖರ್ಗೆ

ಜಲಜೀವನ್ ಮಿಷನ್ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು 55% ,ಕೇಂದ್ರದ ಪಾಲು 45%, ಬಿಜೆಪಿಯ ಭ್ರಷ್ಟಾಚಾರದ ಪಾಲು 40%, ಮೋದಿಯವರಿಗೆ ಕ್ರೆಡಿಟ್ ಮಾತ್ರ 100%. ಬಿಜೆಪಿ ಅವಧಿಯಲ್ಲಿ ಜಲಜೀವನ್ ಮಿಷನ್ ಎನ್ನುವುದು “ಭ್ರಷ್ಟಾಚಾರದ ಮಿಷನ್” ಆಗಿತ್ತು, ಇದರ ಪರಿಣಾಮವನ್ನೇ ಇಂದಿಗೂ ರಾಜ್ಯದ ಜನತೆ ಎದುರಿಸುತ್ತಿದ್ದಾರೆ ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಜಲಜೀವನ್ ಮಿಷನ್ ಭ್ರಷ್ಟಾಚಾರವನ್ನು ರಾಜ್ಯದ ಜನರ ಮುಂದಿಟ್ಟಿದ್ದಾರೆ.

ಈಗಲೂ ಜನರ ಜೀವ ಹಿಂಡುತ್ತಿದೆ

ಮಳೆ ನಿಂತರೂ ಹನಿ ನಿಲ್ಲದು ಎಂಬ ಗಾದೆಯಂತೆ ಬಿಜೆಪಿಯ ನಾಲ್ಕು ವರ್ಷದ ಭ್ರಷ್ಟ ಆಡಳಿತದ ಅವ್ಯವಸ್ಥೆಯು ಫಲ ಈಗಲೂ ಜನರ ಜೀವ ಹಿಂಡುತ್ತಿದೆ. ನಮ್ಮ ಸರ್ಕಾರ ಬಂದು ಎರಡು ತಿಂಗಳಾಗಿದೆ, ಭ್ರಷ್ಟ ಬಿಜೆಪಿ ಮಾಡಿದ್ದ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಜಾರಿಯಲ್ಲಿದೆ. ಜಲಜೀವನ್ ಮಿಷನ್ ನಲ್ಲಿ ಪ್ರತಿ ಮನೆಗೂ ನೀರು ಕೊಟ್ಟೇ ಬಿಟ್ಟಿದ್ದೇವೆ ಎಂದು ಪ್ರಚಾರ ಮಾಡಿದ್ದ ಬಿಜೆಪಿ  ಈಗ ತಮ್ಮ ಸುಳ್ಳನ್ನು ತಾವೇ ಬಯಲು ಮಾಡುತ್ತಿದ್ದಾರೆ. ಈ ಫ್ಯಾಕ್ಟ್ ಚೆಕ್ ಕೆಲಸವನ್ನು ಬಿಜೆಪಿ ಹೀಗೆಯೇ ಮುಂದುವರೆಸಲಿ! ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಂಟಿರುವ ಕೊಳೆಯನ್ನು ಸ್ವಚ್ಛ ಮಾಡುತ್ತಿದ್ದೇನೆ

ಬಿಜೆಪಿ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಭ್ರಷ್ಟಾಚಾರದ ಆರೋಪದಲ್ಲಿ ರಾಜೀನಾಮೆ ನೀಡಿದ್ದರು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 40% ಕಮಿಷನ್ ಗೆ ಗುತ್ತಿಗೆದಾರರೊಬ್ಬರು ಜೀವವನ್ನೇ ಬಿಡಬೇಕಾಯ್ತು. ನನ್ನ ಇಲಾಖೆಗೆ ಇಷ್ಟು ಗಾಢವಾಗಿ ಅಂಟಿರುವ ಕೊಳೆಯನ್ನು ಸ್ವಚ್ಛ ಮಾಡುತ್ತಿದ್ದೇನೆ. ಬಿಜೆಪಿ ಅವಧಿಯಲ್ಲಿ ಪರ ರಾಜ್ಯಗಳತ್ತ ಮುಖ ಮಾಡಿದ್ದ ಉದ್ಯಮಗಳನ್ನು, ಹೂಡಿಕೆಗಳನ್ನು ಕರ್ನಾಟಕದತ್ತ ಕರೆತರುತ್ತಿದ್ದೇವೆ, ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಿಸುತ್ತಿದ್ದೇವೆ. ಅಜಾನ್, ಹಲಾಲ್, ಹಿಜಾಬ್ ಎಂಬ ಪ್ರಚೋದನೆಗೆ ಕನ್ನಡಿಗರು ಸಂಪೂರ್ಣ ತಿರಸ್ಕಾರದ ಉಡುಗೊರೆ ಕೊಟ್ಟಿದ್ದಾರೆ, ಬಿಜೆಪಿ ಮುಕ್ತ ದಕ್ಷಿಣ ಭಾರತವಾಗಿದೆ, ಆದರೂ ಬುದ್ದಿ ಕಲಿಯದೆ ಸುಳ್ಳಿನ ಸೌಧ ಕಟ್ಟುವುದನ್ನು ಮುಂದುವರೆಸಿದ ಬಿಜೆಪಿಯನ್ನು ದೇಶದ ಜನ ತಿರಸ್ಕರಿಸುವುದು ನಿಶ್ಚಿತ. ಒಂದು ರಾಷ್ಟ್ರೀಯ ಪಕ್ಷವಾಗಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ್ದು ಬಿಜೆಪಿಯ  ರಾಜಕೀಯ ದಿವಾಳಿತನ. ಮೇಲ್ಮನೆ, ಕೆಳಮನೆಗಳಲ್ಲಿ ವಿರೋಧ ಪಕ್ಷದ ನಾಯಕನ ಕುರ್ಚಿ ಖಾಲಿ ಇದೆ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿ ಮೊದಲು ತಮ್ಮ ರಾಜಕೀಯ ದಾರಿದ್ರ್ಯವನ್ನು ನಿವಾರಣೆ ಮಾಡಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ