Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಿ.ಟಿ ಲಲಿತಾ ನಾಯಕ್ ಬಡಾವಣೆಯಲ್ಲಿ ಅವ್ಯವಹಾರ: ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ಮಂಡ್ಯನಗರದ ಬಿ.ಟಿ.ಲಲಿತಾ ನಾಯಕ್ ಬಡಾವಣೆಯಲ್ಲಿ ಬಂಜಾರ ಸಮುದಾಯದ ಅರ್ಹ ಬಡವರಿಗೆ ಮೀಸಲಾಗಿಟ್ಟಿದ್ದ ನಿವೇಶನಗಳನ್ನು ಹಣಕ್ಕಾಗಿ ಇತರೆ ಜಾತಿಯವರಿಗೆ ಅಕ್ರಮವಾಗಿ ನೀಡಿ ಸುಮಾರು ₹ 50 ಲಕ್ಷ ಕ್ಕೂ ಹೆಚ್ಚು ಅಕ್ರಮ ಹಣ ಪಡೆದು ಅವ್ಯವಹಾರ ನಡೆಸಿರುವ ಕೃಷ್ಣನಾಯಕ್ ಕುಟುಂಬ ಸದಸ್ಯರ ವಿರುದ್ದ ಮಂಡ್ಯ ಜಿಲ್ಲಾಡಳಿತವು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,1987-88 ರಲ್ಲಿ ತಮ್ಮ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅಂದಿನ ಸರ್ಕಾರ ಮೇಲ್ಮನೆ ಸದಸ್ಯೆಯನ್ನಾಗಿ ಮಾಡಿತು, ಆ ಸಂದರ್ಭದಲ್ಲಿ ಬಂಜಾರ ಸಂಘಗಳನ್ನು ಸ್ಥಾಪಿಸಿ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಮಂಡ್ಯದ ಗುತ್ತಲು ಗ್ರಾಮದ ಸರ್ವೆ ನಂಬರ್ 530ರಲ್ಲಿ 1 ಎಕರೆ 28 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು ಎಂದರು.

ನಂತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೃಷ್ಣನಾಯಕ್ ಅವರಿಗೆ ಜವಾಬ್ದಾರಿ ನೀಡಿ ವಸತಿ ವ್ಯವಸ್ಥೆ ಮಾಡಿಕೊಡಲಾಯಿತು, ನಂತರ ಹತ್ತಾರು ಫಲಾನುಭವಿಗಳು ಅಲ್ಲಿ ನೆಲೆಸಿದ್ದು ಅವರೆಲ್ಲರಿಗೂ ಹಕ್ಕು ಪತ್ರ ಲಭ್ಯವಾಯಿತು. 1998ರಲ್ಲಿ ಆ ಬಡಾವಣೆಯನ್ನು ಬಿ ಟಿ ಲಲಿತಾ ನಾಯಕ್ ಬಡಾವಣೆ ಎಂಬುದಾಗಿ ಮರು ನಾಮಕರಣ ಮಾಡಲಾಯಿತು. ಸಂಘದ ಮೂಲಕ ನ್ಯಾಯಬೆಲೆ ಅಂಗಡಿ, ವಾಚನಾಲಯ ಸಮುದಾಯ ಭವನ, ಅಂಗನವಾಡಿ ಕೇಂದ್ರ, ಸಂತ ಸೇವಾಲಾಲ್ ಮಂದಿರವನ್ನು ಮಂಜೂರು ಮಾಡಿಸಲಾಯಿತು. ಆದರೆ ಇತ್ತೀಚೆಗೆ ಕೃಷ್ಣ ನಾಯಕ್ ಮರಣ ಹೊಂದಿದರು. ಆನಂತರ ಆತ ನಡೆಸಿರುವ ಲಕ್ಷಾಂತರ ರೂಪಾಯಿಗಳ ಹಗರಣ ಬಯಯಲಾಗಿದೆ. ಪ್ರಸ್ತುತ ಆತನ ಕುಟುಂಬದ ಸದಸ್ಯರೇ ಸಂಘದ ಪದಾಧಿಕಾರಿಗಳಾಗಿದ್ದು, ಅಕ್ರಮವನ್ನು ಮುಂದುವರಿಸುತ್ತಿದ್ಧಾರೆ. ಅವರನ್ನು ಕೂಡಲೇ ಬಂಧಿಸಿ, ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರಸ್ತುತ ಕೃಷ್ಣ ನಾಯಕನ ಪತ್ನಿ ಮಂಗಳಮ್ಮ ಸಂಘದ ಈಗಿನ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಸ್ವಯಂ ಘೋಷಿತ ಅಧ್ಯಕ್ಷರಾಗಿ ಅವರ ತಂಗಿಯ ಮಗ ವೆಂಕಟ ನಾಯಕ, ಖಜಾಂಚಿಯಾಗಿ ಮಗ ನಂದರಾಜ ನಾಯಕ, ಸಹ ಕಾರ್ಯದರ್ಶಿಯಾಗಿ ಅಳಿಯ ಕುಮಾರ ನಾಯಕ, ಸಂಘಟನಾ ಕಾರ್ಯದರ್ಶಿಯಾಗಿ ಅಣ್ಣನ ಮಗ ರಮೇಶ ನಾಯಕ, ಸದಸ್ಯರಾಗಿ ಪುತ್ರಿಯರಾದ ಮಮತಾ ಮತ್ತು ಅನಿತಾಭಾಯಿ ಅವರಿದ್ದು, ಇಂದಿಗೂ ವಂಚನೆ ಮುಂದುವರಿಸುತ್ತಿದ್ದಾರೆ. ಅಕ್ರಮವನ್ನು ಪ್ರಶ್ನಿಸಲು ಬಂದವರಿಗೆ ಬೆದರಿಕೆ ಹಾಕುತ್ತಿದ್ದಾರೆಂದು ದೂರಿದರು.

ಸರ್ಕಾರಿ ಆಸ್ತಿಯನ್ನು ತಮ್ಮದೇ ಸ್ವಂತ ಆಸ್ತಿ ಎಂದು ಪರಿಗಣಿಸಿ, ತಮಗೆ ಇಷ್ಟ ಬಂದವರಿಗೆ ನೀಡುತ್ತಿರುವ ಕೃಷ್ಣ ನಾಯಕ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ನಷ್ಟದ  ಹಣವನ್ನು ವಸೂಲಿ ಮಾಡಬೇಕು. ಬೇರೆ ಸಮುದಾಯದವರು ಆಕ್ರಮಣ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.  ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ಪಡಿಸಿದರು.

ಗೋಷ್ಠಿಯಲ್ಲಿ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಸಿ.ಎಂ ಶಿವಕುಮಾರ್ ನಾಯಕ್, ಕರ್ನಾಟಕ ಬಂಜಾರ ಜಾಗೃತಿ ದಳದ ರಾಜ್ಯಾಧ್ಯಕ್ಷ ತಿಪ್ಪ ಸರ್ ನಾಯಕ, ಮಂಡ್ಯ ಜಿಲ್ಲಾ ಲಂಬಾಣಿ ಸೇವಾ ಸಂಘದ ಅಧ್ಯಕ್ಷ ಎಂ.ಕೆ.ಬಾಲರಾಜ್, ಕರ್ನಾಟಕ ಬಂಜಾರ ಜಾಗೃತಿ ದಳದ ಮಹೇಶ್ ನಾಯಕ, ಮುಖಂಡರಾದ ಪುಟ್ಟಸ್ವಾಮಿ ,ಶೀನಾ ನಾಯಕ್ ಹಾಗೂ ವಿವೇಕ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!