Friday, September 20, 2024

ಪ್ರಾಯೋಗಿಕ ಆವೃತ್ತಿ

ಮಾ.8-16ರವರೆಗೆ ಬೇಬಿಬೆಟ್ಟದಲ್ಲಿ ಜಾತ್ರಾ ಮಹೋತ್ಸವ : ದರ್ಶನ್ ಪುಟ್ಟಣ್ಣಯ್ಯ

ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ ಮಾ.8ರಿಂದ 16ರವರೆಗೆ ಜಾತ್ರಾ ಮಹೋತ್ಸವ ಆಯೋಜಿಸಲಾಗಿದ್ದು, ಪ್ರಮುಖವಾಗಿ ಸಾಮೂಹಿಕ ಸರಳ ವಿವಾಹಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಮಾ. 8ರಂದು ಸಂಜೆ 4ಗಂಟೆಗೆ ಜಾತ್ರಾ ಮಹೋತ್ಸವ ಮತ್ತು ವಿವಿಧ ಇಲಾಖೆಗಳ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ರಾತ್ರಿ 7ಗಂಟೆಗೆ ಚೋರ ಚರಣ ದಾಸ ನಾಟಕ ಪ್ರದರ್ಶನ ಹಾಗೂ ಭಜನೆ ಇರಲಿದೆ ಎಂದು ತಿಳಿಸಿದರು.

ಇನ್ನು ಈ ವರ್ಷ ಮಹಿಳೆಯರಿಗಾಗಿ 9ರಂದು ಬೆಳಗ್ಗೆ 10ಗಂಟೆಗೆ ರಂಗೋಲಿ, ಲೆಮನ್ ಅಂಡ್ ಸ್ಪೂನ್ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆ ಆಯೋಜಿಸಲಾಗಿದೆ. ರಾತ್ರಿ 7ಗಂಟೆಗೆ ಗಾನಸುಧೆ ಮೆಲೋಡಿಸ್‌ನಿಂದ ರಸಮಂಜರಿ ಹಮ್ಮಿಕೊಳ್ಳಲಾಗಿದೆ.

10ರಂದು ಬೆಳಗ್ಗೆ 10ಗಂಟೆಗೆ ಪುರುಷರ ವಾಲಿಬಾಲ್ ಪಂದ್ಯಾವಳಿ, ರಾತ್ರಿ 7ಗಂಟೆಗೆ ಗ್ರಾಮರಂಗ ಸಾಂಸ್ಕೃತಿಕ ವೇದಿಕೆಯಿಂದ ಸುಗಮ ಸಂಗೀತ, 11ರಂದು ಬೆಳಗ್ಗೆ 10ಗಂಟೆಗೆ ಪುರುಷರ ಕಬಡ್ಡಿ ಪಂದ್ಯಾವಳಿ ಹಾಗೂ ರಾತ್ರಿ 7ಗಂಟೆಗೆ ಭರತನಾಟ್ಯ, 8ಗಂಟೆಗೆ ಪವಾಡ ರಹಸ್ಯ ಬಯಲು ಹಾಗೂ ಮ್ಯಾಜಿಕ್ ಷೋ ಇರಲಿದೆ. 12ರಂದು ಮಧ್ಯಾಹ್ನ 1ಗಂಟೆಗೆ ನಾಡ ಕುಸ್ತಿ ಪಂದ್ಯಾವಳಿ ಮತ್ತು ರಾತ್ರಿ 8.30ಕ್ಕೆ ಶನಿಮಹಾತ್ಮೆ ಅಥವಾ ರಾಜವಿಕ್ರಮ ಪೌರಾಣಿಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.

13ರಂದು ಬೆಳಗ್ಗೆ 9.10ರಿಂದ 9.40ರವರೆಗೆ ಸಲ್ಲುವ ಲಗ್ನದಲ್ಲಿ ಸಾಮೂಹಿಕ ಸರಳ ವಿವಾಹ ಹಾಗೂ ಮಧ್ಯಾಹ್ನ 1ಗಂಟೆಗೆ ಅನ್ನದಾಸೋಹ ನಡೆಯಲಿದೆ. ವಿವಾಹವಾಗುವವರಿಗೆ ತಾಳಿ, ವಾಚ್ ಹಾಗೂ ಹೊಸಬಟ್ಟೆಗಳನ್ನು ನೀಡಲಾಗುವುದು. ರಾಜ್ಯದ ಯಾವ ಜಿಲ್ಲೆಯವರಾದರೂ ಪಾಲ್ಗೊಳ್ಳಬಹುದಾಗಿದ್ದು, ಆಸಕ್ತರು ರೈತ ಸಂಘದ ಸದಸ್ಯರನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು.

ಈಗಾಗಲೇ 50ಕ್ಕೂ ಹೆಚ್ಚು ಜೋಡಿ ಹೆಸರು ನೋಂದಣಿಯಾಗಿದೆ. ಅಂದು ರಾತ್ರಿ 8ಗಂಟೆಗೆ ಮಿಮಿಕ್ರಿ ಗೋಪಿ ಹಾಗೂ ಕಾಟೇರ ಕೇಶವ್ ತಂಡದಿಂದ ಹಾಸ್ಯಸಂಜೆ, 14ರಂದು ಬೆಳಗ್ಗೆ 10ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಂಜೆ 6.30ರಿಂದ ಬ್ಯಾಡರಹಳ್ಳಿ ಶಾಲಾ ಮಕ್ಕಳಿಂದ ನಾಟಕ, ರಾತ್ರಿ 7.30ಕ್ಕೆ ಕ್ಯಾತನಹಳ್ಳಿ ಗುರುಕಲ ಮಕ್ಕಳಿಂದ ಕಂಸಾಳೆ ಪ್ರದರ್ಶನ, 8ಗಂಟೆಗೆ ಕಲಾವಿದರಾದ ಚಂದ್ರಪ್ರಭ ಹಾಗೂ ವಿನೋದ್ ಗೊಬ್ಬರಗಾಲ ತಂಡದಿಂದ ಹಾಸ್ಯಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

15ರಂದು ರಥೋತ್ಸವ ಹಾಗೂ ಬಹುಮಾನಕ್ಕಾಗಿ ಉತ್ತಮ ರಾಸುಗಳ ಆಯ್ಕೆ ಕಾರ್ಯಕ್ರಮ, ರಾತ್ರಿ 8ಗಂಟೆಗೆ ಕೇಬಲ್ ಮಂಜು ತಂಡದಿಂದ ರಸಸಂಜೆ ಮತ್ತು 16ರಂದು ಸಂಜೆ 4ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭವಿದ್ದು, ಸಚಿವರಾದ ಚಲುವರಾಯಸ್ವಾಮಿ ಹಾಗೂ ಕೆ.ವೆಂಕಟೇಶ್ ಭಾಗವಹಿಸಲಿದ್ದಾರೆಂದು ಹೇಳಿದರು.

ರೈತ ಸಂಘದ ಚಂದ್ರಣ್ಣ, ದಯಾನಂದ, ವಿಜಯ್‌ಕುಮಾರ್, ಗಾಣದಾಳು ನಾಗರಾಜು ಸುದ್ದಿಗೋಷ್ಟಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!