Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಳುವಾಗಿದ್ದ 125 ಮೊಬೈಲ್ ಗಳು ವಾರಸುದಾರರಿಗೆ ವಾಪಸ್: ಮೊಬೈಲ್ ಕಳುವಾದರೆ ನೀವೇನು ಮಾಡಬೇಕು ?

ಕಳ್ಳತನವಾಗಿ ಹಾಗೂ ಕಳೆದು ಹೋಗಿದ್ದ ಸುಮಾರು 22 ಲಕ್ಷ ರೂ.ಮೌಲ್ಯದ 125 ಮೊಬೈಲ್‌ಗಳನ್ನು ವಾರಸುದಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಗುರುವಾರ ಹಸ್ತಾಂತರ ಮಾಡಿದರು.

ಮಂಡ್ಯ ನಗರದ ಎಸ್ಪಿ ಕಚೇರಿಯಲ್ಲಿರುವ ಪೋಲಿಸ್ ಭವನದಲ್ಲಿ ವಾರಸುದಾರರಿಗೆ ಮೊಬೈಲ್ ಹಸ್ತಾಂತರಿಸಿ
ಮಾತನಾಡಿದ ಎಸ್ಪಿ ಎನ್.ಯತೀಶ್, ಜಿಲ್ಲೆಯಲ್ಲಿ ಸಾರ್ವಜನಿಕರು ಆಕಸ್ಮಿಕವಾಗಿ ಕಳೆದುಕೊಂಡಿದ್ದ ಅಥವಾ ಕಳ್ಳತನವಾಗಿದ್ದ ಸ್ಮಾರ್ಟ್ ಫೋನ್‌ಗಳನ್ನು ಪತ್ತೆ ಮಾಡಲಾಗಿದೆ ಎಂದರು.

ಎಎಸ್ಪಿ ಸಿ.ಇ.ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಿಇಎನ್ ಅಪರಾಧ ಠಾಣೆಯ ಆರಕ್ಷಕ ನಿರೀಕ್ಷಕ ಮಂಜೇಗೌಡ ನೇತೃತ್ವದಲ್ಲಿ ಪಿಎಸ್‌ಐಗಳಾದ ರಾಘವೇಂದ್ರ ಕಠಾರಿ, ರಸೂಲಸಾಬ ಗೌಂಡಿ, ಸಿಬ್ಬಂದಿ ಗಿರೀಶ್, ಸುಮನ್ ತಂಡ, ಕಳೆದ ಮೂರು ತಿಂಗಳಿನಿಂದ ಕಾರ್ಯಾಚರಣೆ ನಡೆಸಿ, ಮೊಬೈಲ್‌ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಹಿಂದೆ 130 ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದೆ. ಇದೀಗ 125 ಮೊಬೈಲ್‌ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸುಮಾರು 45 ಲಕ್ಷ ರೂ. ಮೌಲ್ಯದ ಸ್ಮಾರ್ಟ್‌ ಪೋನ್ ನಾಪತ್ತೆ ಪ್ರಕರಣವನ್ನು ಪತ್ತೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಾರ್ವಜನಿಕರ ಮೊಬೈಲ್‌ಗಳು ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ತನಿಖೆ ನಡೆಸಿದಾಗ ಬೇರೆ ಜಿಲ್ಲೆ ಹಾಗೂ ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಸಿಕ್ಕಿವೆ. ಹಲವರು ಗೊತ್ತಿಲ್ಲದೆ ಖರೀದಿ ಮಾಡಿ ಸಿಮ್ ಹಾಕಿದ ಬಳಿಕ ನಮಗೆ ಮಾಹಿತಿ ಸಿಕ್ಕಿದ್ದು, ಅವರಿಗೆ ಸೂಚನೆ ನೀಡಿ ವಾಪಸ್ ತರಿಸಲಾಗಿದೆ. ಈ ಪೈಕಿ ಕೆಲವರು ಕೊರಿಯರ್ ಮೂಲಕವೂ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ ಎಂದು ವಿವರಿಸಿದರು.

ದೂರು ದಾಖಲಿಸಿ

ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಸಂಬಂಧಪಟ್ಟ ದಾಖಲಾತಿ ಹಾಗೂ ಮಾಲೀಕರ ಐಡಿ ದಾಖಲೆಯೊಂದಿಗೆ KSP App ನಲ್ಲಿ e-lost ಪ್ರತಿ ಪಡೆದು www.ceir.gov.in ಲಾಗಿನ್ ಆಗಿ ನಿಮ್ಮ ದೂರನ್ನು ದಾಖಲಿಸಬಹುದು. ಇದರಿಂದ ಕಳೆದು ಹೋದ ಮೊಬೈಲ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರ ಮಾಡಲು ಸಾಧ್ಯ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ದರೋಡೆ ಪ್ರಕರಣದ ಸುಳಿವು

ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ 7 ದರೋಡೆ ಪ್ರಕರಣಗಳಲ್ಲಿ 4 ಪ್ರಕರಣವನ್ನು ಪತ್ತೆ ಮಾಡಲಾಗಿದೆ. ಉಳಿದ 3 ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಸುಳಿವು ಪತ್ತೆಯಾಗಿದೆ ಎಂದು ಎಸ್ಪಿ ಎನ್.ಯತೀಶ್ ತಿಳಿಸಿದರು.

ಇದಲ್ಲದೆ ಹೈವೈಯಲ್ಲಿ ಅಪರಾಧ ಪ್ರಕರಣ ತಡೆಯುವ ನಿಟ್ಟಿನಲ್ಲಿ ಕೆಲ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ನಾಲ್ಕು ಹೈವೇ ಪಟ್ರೋಲ್ ವಾಹನ ಗಸ್ತು ತಿರುಗುತ್ತಿರುತ್ತದೆ.ವಾಹನ ಸವಾರರು ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಬಾರದು. ಬದಲಿಗೆ ಟೋಲ್ ಫ್ಲಾಜಾ, ಪೆಟ್ರೋಲ್ ಬಂಕ್ ಅಥವಾ ಹೋಟೆಲ್ ಎದುರು ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯಬೇಕು ಎಂದು ಸೂಚಿಸಿದರು.

ಮಾಹಿತಿ ನೀಡಿ

ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಸಾರ್ವಜನಿಕರು ಓಡಾಡುವ ಪ್ರದೇಶದಲ್ಲಿ ಯುವಕರು ಮದ್ಯಸೇವನೆ ಮಾಡುವುದು ಗಮನಕ್ಕೆ ಬಂದಿದೆ. ಮದ್ಯ ಸೇವನೆ ಮಾಡಿ ಅನಗತ್ಯ ತೊಂದರೆ ಕೊಡುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದರು.

ಈ ಸಂದರ್ಭದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!