ಲೋಕಸಭಾ ಚುನಾವಣೆ ಕಾಂಗ್ರೇಸ್-ಬಿಜೆಪಿ ನೇತೃತ್ವದ ಐಎನ್‌ಡಿಐಎ- ಎನ್‌ಡಿಎ ಸೋಲಿಸಿ, ಮೂರನೇ ರಾಷ್ಟ್ರೀಯ ಶಕ್ತಿಯಾಗಿರುವ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಅಭ್ಯರ್ಥಿಗಳ ಆನೆ ಗುರುತಿಗೆ ಮತ ನೀಡಿ ಬೆಂಬಲಿಸಬೇಕೆಂದು ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್-ಬಿಜೆಪಿ ನೇತೃತ್ವದ ಐಎನ್‌ಡಿಐಎ-ಎನ್‌ಡಿಎ ರಾಜಕೀಯ ಪಕ್ಷಗಳು “ಭಾರತ ಸಂವಿಧಾನ”ದ ಬದ್ದತೆಯನುಸಾರ ಮುಕ್ತ ಮತ್ತು ನ್ಯಾಯ ಸಮ್ಮತವಾದ ಚುನಾವಣೆ ನಡೆಸದೇ… ಹಣ, ಹೆಂಡ, ಆಸೆ, ಆಮಿಷಗಳನ್ನೊಡ್ಡಿ ಅನೈತಿಕವಾಗಿ, ಚುನಾವಣೆ ಅಕ್ರಮಗಳನ್ನು ನಡೆಸುವ ಮೂಲಕ ಮತದಾರರಿಗೆ ಅಲ್ಪದಾಸೆ ತೋರಿಸಿ, ಅಧಿಕಾರ ಪಡೆಯಲೆತ್ನಿಸುತ್ತಿರುವುದು ಭಾರತ ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ ಎಂದರು.
ಕಳೆದ 10ವರ್ಷಗಳ ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ, ಬನಿಯಾ, ಠಾಕೂರು ಮುಂತಾದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿದ್ದಕ್ಕೆ ಕಾಂಗ್ರೆಸ್ ಬೆಂಬಲಿಸಿದೆ. ಆದರೆ ಭಾರತದ ಶೋಷಿತ ಸಮಾಜ ಶೇ75ರ ಮೀಸಲಾತಿಗೆ ಒತ್ತಾಯಿಸಿದಾಗ ಪರಿಗಣಿಸದೆ ಅನ್ಯಾಯ ಮಾಡಲಾಗಿದೆ ಎಂದರು. ಕ್ಷುಲ್ಲಕ ಕಾರಣಕ್ಕಾಗಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.
ಗೋಷ್ಠಿಯಲ್ಲಿ ಬಿಎಸ್ಪಿ ಮುಖಂಡ ಎಂ.ಎಸ್.ವೆಂಕಟೇಶ್, ದಸಂಸ ಮುಖಂಡರಾದ ಅನಿಲ್ ಕುಮಾರ್, ಜಿಲ್ಲಾಧ್ಯಕ್ಷ ಶ್ರೀನಿವಾಸ್, ಆನಂದ ಮತ್ತಿತರರು ಉಪಸ್ಥಿತರಿದ್ದರು.




