Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ನೌಕರರನ್ನು ಕೂಡಿ ಹಾಕಿದ್ದಕ್ಕೆ ಆಕ್ರೋಶ: ನಾಳೆ ಸಭೆ ನಡೆಸಲು ಒಪ್ಪಿದ ಗಾರ್ಮೆಂಟ್ಸ್ ಆಡಳಿತ ಮಂಡಳಿ

ಪಿಎಫ್ ಹಾಗೂ ಇಎಸ್ಐ ಕೇಳಿದ ಸುಮಾರು 350 ಮಹಿಳಾ ನೌಕರರನ್ನು ಗಾರ್ಮೆಂಟ್ ಒಳಭಾಗದಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ಬಾಲಾಜಿ ಗಾರ್ಮೆಂಟ್ಸ್ ನಲ್ಲಿ ಗುರುವಾರ ನಡೆದಿದೆ. ಈ ಘಟನೆಯನ್ನು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರು ತೀವ್ರವಾಗಿ ಖಂಡಿಸಿ, ಆಕ್ರೋಶ ವ್ಯಕ್ತಪಡಿದ್ದಾರೆ.

ಬಾಲಾಜಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕ ಹೆಣ್ಣು ಮಕ್ಕಳ ಸಂಬಳದಿಂದ ಪ್ರಾರಂಭದಿಂದಲೇ ಪಿಎಫ್ ಹಾಗೂ ಇಎಸ್ಐ ಹಣವನ್ನು ಕಡಿತ ಮಾಡಿಕೊಳ್ಳಲಾಗಿದೆ. ಆದರೆ ಇಲ್ಲಿಯ ತನಕ ಅವರ ಖಾತೆಗೆ ಹಣ ಜಮಾವಣೆ ಮಾಡಿಲ್ಲ ಹಾಗೂ ಈ ಬಾರಿಯ ಬೋನಸ್ ಕೂಡ ನೀಡಿಲ್ಲ, ನಮ್ಮ ಹಣ ನಮಗೆ ಸಿಗುವವರೆಗೂ ಕೆಲಸ ಮಾಡುವುದಿಲ್ಲ ಎಂದು ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆಗೆ ಕೂತ ಮಹಿಳಾ ನೌಕರರನ್ನು ಆಡಳಿತ ಮಂಡಳಿಯು ಕೂಡಿ ಹಾಕಿತ್ತು.

ಈ ವಿಚಾರ ತಿಳಿದ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಮಹಿಳಾ ಮುನ್ನಡೆಯ ಶಿಲ್ಪ ಹಾಗೂ ಮದ್ದೂರಿನ ಜನಶಕ್ತಿಯ ತಾಲ್ಲೂಕು ಅಧ್ಯಕ್ಷ ನಗರಗೆರೆ ಜಗದೀಶ್ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ, ವಿಚಾರಿಸಿದಾಗ ಯಾರನ್ನು ಒಳಗೆ ಬಿಡುವುದಿಲ್ಲ, ಇದು ಕಾರ್ಖಾನೆ ಮತ್ತು ಅಲ್ಲಿನ ಕೆಲಸಗಾರರಿಗೆ ಸಂಬಂಧ ಪಟ್ಟ ವಿಚಾರ ಎಂದು ಅಲ್ಲಿನ ಸಿಬ್ಬಂದಿ ಉದ್ದಟತನದಿಂದ ವರ್ತಿಸಿದರು, ಇದರಿಂದ ಮಾತಿನ ಚಕಮಕಿ ನಡೆಯಿತು.

ಕೊನೆಗೆ ಕರ್ನಾಟಕ ಜನಶಕ್ತಿಯ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮುಖಾಂತರ ವಿಚಾರ ತಿಳಿಸಿದರು. ಕೂಡಲೇ ಎಸ್ಪಿ ಯತೀಶ್ ಅವರು, ಮದ್ದೂರಿನ ಪೋಲಿಸ್ ಅಧಿಕಾರಿಗಳಾದ ಶ್ರೀನಿವಾಸ್ ಆಚಾರ್ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಶ್ ಅವರನ್ನು ಸ್ಥಳಕ್ಕೆ ತೆರಳುವಂತೆ ಸೂಚಿಸಿದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದ ನಂತರ ಕಾರ್ಖಾನೆಯ ಬೀಗ ತೆಗೆಯಲಾಯಿತು. ಈ ವಿಷಯವನ್ನು ಮದ್ದೂರು ಕಾರ್ಮಿಕ ಅಧಿಕಾರಿಗಳ ಗಮನಕ್ಕೂ ತರಲಾಯಿತು. ನಂತರ ಗಾರ್ಮೆಂಟ್ ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ನಾಳೆ ಸಭೆ

ಕಾರ್ಖಾನೆ ಮಾಲೀಕರು, ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರು ಮತ್ತು ಕಾರ್ಮಿಕ ಅಧಿಕಾರಿಗಳ‌ ಸಮ್ಮುಖದಲ್ಲಿ ನ.10ರಂದು ಸಭೆ ನಡೆಸುವುದಾಗಿ ಕಾರ್ಖಾನೆ ಮಾಲಿಕರು ಒಪ್ಪಿಕೊಂಡಿದ್ದಾರೆ. ಸಭೆ ನಡೆದು ಸಮಸ್ಯೆ ಬಗೆ ಹರಿಯುವ ತನಕ ಕೆಲಸವನ್ನು ಸ್ಥಗಿತ ಗೊಳಿಸುತ್ತೇವೆ ಎಂದು ಮಹಿಳಾ ಕಾರ್ಮಿಕರು ನಿರ್ಧಾರ ಕೈಗೊಂಡಿದ್ದಾರೆ. ನಾಳೆ ಮಾತಿಗೆ ತಪ್ಪಿದರೆ ಪ್ರತಿಭಟನೆ ಮುಂದುವರೆಸುವುದಾಗಿ ಸಂಘಟನೆಯ ಮುಖಂಡರು, ಮಹಿಳಾ ಕಾರ್ಮಿಕರು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!