Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಿಂಚಣಿ ಹಣವನ್ನು ಸಾಲಕ್ಕೆ ಜಮಾ ಮಾಡುತ್ತಿರುವ ಬ್ಯಾಂಕುಗಳು


  • ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಣ ಸಾಲಕ್ಕೆ ಜಮಾ

  • ಜನಪರ ವೇದಿಕೆಯಿಂದ ಅಪರ ಜಿಲ್ಲಾಧಿಕಾರಿ ಹೆಚ್.ಎಲ್.ನಾಗರಾಜು ಅವರಿಗೆ ಮನವಿ

ರೈತರಿಗೆ ದೊರಕುವ ಸೌಲಭ್ಯಗಳನ್ನು ಬ್ಯಾಂಕುಗಳು ಸಾಲದ ಹಣಕ್ಕಾಗಿ ಜಮಾ ಮಾಡಿಕೊಂಡು ಮುಟ್ಟುಗೊಲು ಹಾಕಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಹೆಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಲಾಯಿತು.

ಮದ್ದೂರು ತಾಲ್ಲೂಕು  ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು, ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಬ್ಯಾಂಕುಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಾಮಾಜಿಕ ಭದ್ರತೆ ಯೋಜನೆಯಡಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಸರ್ಕಾರ ಹಣದ ರೂಪದಲ್ಲಿ ಪಿಂಚಣಿ ನೀಡುತ್ತಿದ್ದು, ಆ ಹಣವನ್ನು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳು, ರೈತರು ಪಡೆದ ಬೆಳೆ ಸಾಲಕ್ಕಾಗಿ ಜಮಾ ಮಾಡಿಕೊಳ್ಳುತ್ತಿವೆ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನದ ಹಣವನ್ನು ಕಡಿತ ಮಾಡಿಕೊಳ್ಳುತ್ತಿವೆ ಎಂದು ದೂರಿದರು.

ಪ್ರಧಾನ ಮಂತ್ರಿ ಯೋಜನೆಯಡಿ ರೈತರಿಗೆ ತಲಾ 2,000 ರೂ.ಗಳನ್ನ 6 ಕಂತುಗಳಲ್ಲಿ ವಿತರಿಸಲಾಗುತ್ತಿತ್ತು ಈ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಆದರೆ ಬ್ಯಾಂಕುಗಳು ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ಮುಖ್ಯಮಂತ್ರಿಗಳು ಬಹಳ ಸ್ಪಷ್ಟವಾಗಿ ಬ್ಯಾಂಕಿನ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದು, ರೈತರಿಗೆ ಸಾಲದ ನೋಟಿಸ್ ಆಗಲಿ, ಜಪ್ತಿ ಮಾಡುವ ಕಾರ್ಯಕ್ಕೆ ಮುಂದಾಗಬಾರದೆಂದು ಎಚ್ಚರಿಕೆ ನೀಡಿದರೂ ಸಹ ಆ ಆದೇಶವನ್ನು ಗಾಳಿಗೆ ತೂರಿ ರೈತರನ್ನು ಶೋಷಣೆ ಮಾಡಿದ್ದಾರೆಂದು ಆರೋಪಿಸಿದರು.

ಬೇರೆ ರಾಜ್ಯಗಳಿಂದ ಬಂದು ಕೆಲಸ ಮಾಡುತ್ತಿರುವ ಅಧಿಕಾರಿಗಳು ಕನ್ನಡ ಬಂದರೂ ಸಹ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಅಲ್ಲದೆ ರೈತರಿಗೆ ಬ್ಯಾಂಕಿನ ಮಾಹಿತಿಗಳನ್ನು ಸರಿಯಾಗಿ ನೀಡುತ್ತಿಲ್ಲ, ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಬ್ಯಾಂಕಿನ ವ್ಯವಸ್ಥಾಪಕರ ಸಭೆ ಕರೆದು ಈ ಎಲ್ಲಾ ಸಮಸ್ಯೆಗಳನ್ನು ಬಗಹರಿಸಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಹೆಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಸೋಮಶೇಖರ್. ರಾಜಸ್ವ  ನಿರೀಕ್ಷಕ ಜಗದೀಶ್, ಮುಖಂಡರಾದ ಪ್ರಕಾಶ್, ಶ್ರೀನಿವಾಸ್, ಮ.ನ.ಪ್ರಸನ್ನ ಕುಮಾರ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!