Sunday, November 22, 2026

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಶಿಕ್ಷಕರ ಕ್ಷೇತ್ರ| ಜೆಡಿಎಸ್ ಅಭ್ಯರ್ಥಿಗೆ ಶಿಕ್ಷಕರ ಸಮಸ್ಯೆಯ ಅರಿವಿಲ್ಲ: ಶಿವನಂಜು

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿವೇಕಾನಂದ ಅವರಿಗೆ ಶಿಕ್ಷಕರ ನೈಜ್ಯ ಸಮಸ್ಯೆಗಳ ಬಗ್ಗೆ ಅರಿವಿಲ್ಲ, ಜೆಡಿಎಸ್ ಪಕ್ಷವು ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮೇಲ್ಮನೆ ಚುನಾವಣೆಗೆ ಕಣಕ್ಕಿಳಿಸುವ ಮೂಲಕ ನೈತಿಕವಾಗಿ ಅಧಃಪತನಕ್ಕಿಳಿದಿದೆ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಚುನಾವಣೆಯೂ ಶಿಕ್ಷಣ ತಜ್ಞರಾದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾದ ಜೆಡಿಎಸ್ ಅಭ್ಯರ್ಥಿ ವಿವೇಕಾನಂದ ಅವರ ನಡುವಿನ ಚುನಾವಣೆಯಾಗಿ ಮಾರ್ಪಟ್ಟಿರುವುದು ದುರಂತವೇ ಸರಿ ಎಂದರು.

ಕಾಂಗ್ರೆಸ್ ಪಕ್ಷವು ಶಿಕ್ಷಣ ತಜ್ಞ, ವಾಗ್ಮಿ, ದಕ್ಷ ಆಡಳಿತಗಾರ, ಸೆನೆಟ್ ಸದಸ್ಯರಾಗಿ, ಉಪಸಭಾಪತಿಗಳಾಗಿ, ವಿಧಾನಪರಿಷತ್ ಸದಸ್ಯರಾಗಿ 24 ವರ್ಷಗಳ ಕಾಲ ಶಿಕ್ಷಕರ ಪ್ರತಿನಿಧಿಯಾಗಿ ಹೋರಾಟ ಮಾಡಿಕೊಂಡು ಬಂದಿರುವ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸಮರ್ಥವಾಗಿ ಪರಿಹಾರಗಳನ್ನು ದೊರಕಿಸಿಕೊಟ್ಟಿರುವ ಶಿಕ್ಷಣ ತಜ್ಞ ಮರಿತಿಬ್ಬೇಗೌಡರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಆದರೆ ಗೊಂದಲದ ಗೂಡಾಗಿರುವ ಜೆ.ಡಿ.ಎಸ್‌. ಹಾಗೂ ಬಿ.ಜೆ.ಪಿ. ಪಕ್ಷಗಳು ಶಿಕ್ಷಣದ ಬಗ್ಗೆ ಗಂಧ-ಗಾಳಿ ಇಲ್ಲದ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿಲ್ಲದ ಎಲ್ಲಿಯ ಶಿಕ್ಷಣ ಕ್ಷೇತ್ರ, ಎಲ್ಲಿಯ ರಿಯಲ್ ಎಸ್ಟೇಟ್ ಉದ್ಯಮ, ಎತ್ತಿಂದತ್ತಣ ಸಂಬಂಧವಯ್ಯ ಎನ್ನುವ ಹಾಗೆ ಕೇವಲ ಹಣ ಬಲದಿಂದಲೇ ಶಿಕ್ಷಣ ಕ್ಷೇತ್ರವನ್ನು ಗೆಲ್ಲಬಹುದೆಂಬ ಹುಂಬುತನದಿಂದ ವಿವೇಕಾನಂದ ಅವರನ್ನು ಕಣಕ್ಕಿಳಿಸಿದೆ ಎಂದು ತಿಳಿಸಿದರು.

ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, 7ನೇ ವೇತನ ಆಯೋಗದ ವರದಿಯ ಜಾರಿ, ಹಳೆ ಪಿಂಚಣಿ ಯೋಜನೆ ಜಾರಿ, ಜ್ಯೋತಿ ಸಂಜೀವಿನಿ ಯೋಜನೆ ಅನುಷ್ಠಾನ, ಅನುದಾನಿತ ಶಿಕ್ಷಕರಿಗೆ ಹೊಸ ಪಿಂಚಣಿ ಯೋಜನೆಯಾಗಲೀ (ಎನ್.ಪಿ.ಎಸ್.) ಹಳೆ ಪಿಂಚಣಿ ಯೋಜನೆ ಜಾರಿಯಾಗಲೀ, ಅನ್ವಯ ಮಾಡದಿರುವ ಬಗ್ಗೆ ಹಾಗೂ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಹೀಗೆ ಹಲವು ಹತ್ತು ಸಮಸ್ಯೆಗಳು ಹಾಗೂ ಹಲವು ಸವಾಲುಗಳನ್ನು ಎದುರಿಸುತ್ತಿರುವ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿಲ್ಲದ ಜೆ.ಡಿ.ಎಸ್‌. ಅಭ್ಯರ್ಥಿ ಬಿ.ಕೆ. ವಿವೇಕಾನಂದ ಅವರಿಂದ ಸಾಧ್ಯವೇ ? ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಬುದ್ಧಿಜೀವಿಗಳ ಚಿಂತಕರ ಚಾವಡಿ ಆಗಬೇಕಾಗಿದ್ದು, ಶಿಕ್ಷಣ ಕ್ಷೇತ್ರದ ಬಗ್ಗೆ ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅಪಾರ ಅನುಭವ ಇರುವ ಶಿಕ್ಷಣ ತಜ್ಞ ಮರಿತಿಬ್ಬೇಗೌಡರನ್ನು ಶಿಕ್ಷಕ ಬಂಧುಗಳು ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ತಮ್ಮ ಪ್ರಥಮ ಪ್ರಾಶಸ್ತ್ರ ಮತವನ್ನು ನೀಡಿ ಬೆಂಬಲಿಸಬೇಕು. ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಶಿಕ್ಷಕರ ಪಾವಿತ್ರತ್ಯತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ನಗರಸಭಾ ಸದಸ್ಯ ಶ್ರೀಧರ್, ಕಾಂಗ್ರೆಸ್ ಮುಖಂಡರಾದ ಕಲ್ಲಹಳ್ಳಿ ನಾಗೇಂದ್ರ, ಕೀಲಾರ ಕೃಷ್ಣ, ಶಿವಲಿಂಗಣ್ಣ ಕೀಲಾರ ಹಾಗೂ ಸೋಮಶೇಖರ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ