Friday, October 11, 2024

ಪ್ರಾಯೋಗಿಕ ಆವೃತ್ತಿ

ಬಸವಣ್ಣನವರ ಆದರ್ಶ ಇಂದಿಗೂ ಮಾದರಿ : ಶ್ವೇತಾ ರವೀಂದ್ರ

ಜಾತಿ ವ್ಯವಸ್ಥೆಯ ವಿರುದ್ಧ ಹನ್ನೆರಡನೇ ಶತಮಾನದಲ್ಲಿಯೇ ದೊಡ್ಡ ಸಾಮಾಜಿಕ ಕ್ರಾಂತಿ ನಡೆಸಿದ ಬಸವಣ್ಣನವರ ಆದರ್ಶ ಇಂದಿಗೂ ಮಾದರಿಯಾಗಿದೆ ಎಂದು ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು. ಬಸವಣ್ಣ ರವರ ಭಾವಚಿತ್ರಕ್ಕೆ ತಹಶೀಲ್ದಾರ್ ಶ್ವೇತಾ ರವೀಂದ್ರ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಬಸವಣ್ಣ ನವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು. ಅವರು ಸರ್ವಜನಾಂಗವನ್ನು ಒಂದುಗೂಡಿಸಿ ಸಮಾನತೆಯನ್ನು ತಂದು ಮನುಷ್ಯತ್ವವನ್ನು ಎತ್ತಿ ಹಿಡಿದ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.

ಶತ ಶತಮಾನಗಳ ಕಾಲ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದಾಸ್ಯಕ್ಕೆ ಒಳಗಾಗಿದ್ದ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಸ್ತ್ರೀ ಕುಲೋದ್ಧಾರಕ ಅವರಾಗಿದ್ದರು. ಶೋಷಣೆಗೆ ಒಳಗಾಗಿದ್ದವರ ಮನಸ್ಸು, ಹೃದಯವನ್ನು ಗೆದ್ದು ಅವರನ್ನೂ ತನ್ನಂತೆ ಕಂಡ ಸಮಾನತಾವಾದಿ ಬಸವಣ್ಣನವರ ಆದರ್ಶಗಳು ಪ್ರಸ್ತುತ ಪೀಳಿಗೆಗೆ ಅವಶ್ಯಕವಾಗಿವೆ ಎಂದರು.

ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕಿ ಡಾ.ವಿನೋದ ಉಪನ್ಯಾಸ ನೀಡಿ, ಯಜ್ಞ-ಯಾಗ, ಹೋಮ-ಹವನ ಮಾಡುತ್ತಾ ಬೆಲೆ ಬಾಳುವ ವಸ್ತುಗಳನ್ನು ಸುಟ್ಟು, ಮುಗ್ಧ ಜೀವಗಳನ್ನು ಆಹುತಿ ಮಾಡಿ, ಗುಡಿ ಗುಡಾರಗಳನ್ನು ಕಟ್ಟಿ ಧಾರ್ಮಿಕ ಶೋಷಣೆ ನಡೆಸುತ್ತಿದ್ದವರ ವಿರುದ್ಧ ಬಂಡೆದ್ದು, ಧಾರ್ಮಿಕ ಶೋಷಣೆ ನಿಲ್ಲಿಸಿದವರು ಬಸವಣ್ಣನವರು ಎಂದರು.

ಜಗಜ್ಯೋತಿ ಬಸವಣ್ಣನವರು ಎಲ್ಲಾ ವರ್ಗದ ಜನರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನೀಡದಿದ್ದಾಗ,ಮಾನವರಿಗೆ ಪ್ರವೇಶವಿಲ್ಲದ ಗುಡಿಯಲ್ಲಿ ದೇವರು ಇರುವುದಿಲ್ಲ. ಬದಲಿಗೆ ದೇಹವೇ ದೇಗುಲ ಎಂದು ಸಾರಿ, ಅಂಗೈ ಮೇಲೆ ಇಷ್ಟಲಿಂಗವನ್ನು ಇಟ್ಟು ಪೂಜಿಸಿದ ಕೀರ್ತಿ ಬಸವಣ್ಣ ನವರಿಗೆ ಸಲ್ಲುತ್ತದೆ. ಅಲ್ಲದೆ ಮೊದಲ ಸಾರ್ವಜನಿಕ ಶಿಕ್ಷಣವನ್ನು ಜಾರಿಗೆ ತಂದು ಅನುಭವ ಮಂಟಪದಲ್ಲಿ 22 ಅನಕ್ಷರಸ್ಥರನ್ನು ಅನಕ್ಷರರನ್ನು ಅಕ್ಷರಸ್ಥರನ್ನಾಗಿ ಮಾಡಿ ಶಿಕ್ಷಣ ಕ್ರಾಂತಿಯ ಹರಿಕಾರ ಎನಿಸಿಕೊಂಡರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು, ಸಹಾಯಕ ಪಶುವೈದ್ಯಾಧಿಕಾರಿ ಡಾ. ಶಿವಲಿಂಗಯ್ಯ, ಉಪ ತಹಶೀಲ್ದಾರ್ ರೇಖಾ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಉಪಾಧ್ಯಕ್ಷರಾದ ಕೆಆರ್‌ಎಸ್ ದೀಪಕ್, ಚಂದ್ರು, ಸೌಮ್ಯ, ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್‌, ನಗರ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕಸಾಪ ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್, ನಗರಾಧ್ಯಕ್ಷೆ ಸರಸ್ವತಮ್ಮ, ಕರವೇ ಅಧ್ಯಕ್ಷ ಚಂದಗಾಲು ಶಂಕರ್‌, ಡಿಎಸ್‌ಎಸ್ ಮುಖಂಡ ಕುಬೇರಪ್ಪ, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್‌ಬಾಬು, ಜಗದೀಶ್ ಸೇರಿದಂತೆ ಇತರ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!