Wednesday, July 24, 2024

ಪ್ರಾಯೋಗಿಕ ಆವೃತ್ತಿ

ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ

ಕೆ.ಆರ್. ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಗುಡುಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ನಿರ್ಮಾಣಕ್ಕೆ ಮನ್ಮುಲ್ ನಿರ್ದೇಶಕ ಡಾಲು ರವಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದ ಹಾಲಿನ ಡೈರಿ ದೇವಾಲಯವಿದ್ದಂತೆ. ದೇವಾಲಯಕ್ಕೆ ತೆರಳಿ ಹೇಗೆ ಭಕ್ತಿಯಿಂದ ನಮಿಸುತ್ತೇವೆಯೋ ಹಾಗೆ ಹಾಲಿನ ಡೈರಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ನಿಮ್ಮ ಸಂಘದ ನೂತನ ಕಟ್ಟಡವನ್ನು ನಿರ್ಮಿಸಲು ಕರ್ನಾಟಕ ರಾಜ್ಯ ಸಹಕಾರ ಹಾಲು ಮಹಾ ಮಂಡಳಿ(ಕೆಎಂಎಫ್) ವತಿಯಿಂದ 4.5 ಲಕ್ಷ ರೂಪಾಯಿಗಳು, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್ಮುಲ್)ದ ವತಿಯಿಂದ 3 ಲಕ್ಷ ರೂಪಾಯಿಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಮಾರು 2ಲಕ್ಷ ರೂಗಳ ಪ್ರೋತ್ಸಾಹ ಧನವನ್ನು ನೀಡುತ್ತದೆ. ಒಟ್ಟು 9.5 ಲಕ್ಷ ರೂಗಳನ್ನು ನೀಡುವುದರಿಂದ ಉತ್ತಮ ಕಟ್ಟಡವನ್ನು ನಿರ್ಮಾಣ ಮಾಡಬಹುದು ಎಂದು ಹೇಳಿದರು.

ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಡೇರಿಯ ಅಭಿವೃದ್ಧಿಗೆ ಸಹಕರಿಸಬೇಕು. ಸಂಘವು ಅಭಿವೃದ್ಧಿ ಹೊಂದಿದಾಗ ಮಾತ್ರ ನಿಮ್ಮ ಕುಟುಂಬ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ ಎಂದರು.

ರೈತರು ಇಂದಿನ ದಿನಗಳಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಹೆಚ್ಚು ಅವಲಂಬಿಸಿದ್ದಾರೆ. ಕೃಷಿಯಲ್ಲಿ ರೈತ ವಾರ್ಷಿಕವಾಗಿ ಆದಾಯ ನೋಡಲು ಸಾಧ್ಯವಾಗುತ್ತದೆ. ಪ್ರತಿ ವಾರಕ್ಕೊಮ್ಮೆ ಆದಾಯ ಬರುವ ಏಕೈಕ ಸಂಸ್ಥೆ ಎಂದರೆ ಅದು ಹೈನುಗಾರಿಕೆ ಎಂದರೆ ತಪ್ಪಾಗಲಾರದು ಎಂದರು.

ಮಹಾಮಾರಿ ಕೊರೋನ ಸಂಕಷ್ಟದ ದಿನಗಳಲ್ಲಿ ರೈತ ತಾನು ಬೆಳೆದ ಬೆಳೆಗೆ ಬೆಲೆ ಸಿಗದೇ ನಷ್ಟ ಅನುಭವಿಸಿ ಜೀವನ ಸಾಗಿಸಲು ಬಹಳ ಕಷ್ಟ ಪಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ರೈತರನ್ನು ಕೈಹಿಡಿದು ಧೈರ್ಯ ಕೊಟ್ಟ ಸಂಸ್ಥೆ ನಮ್ಮದು. ಮುಂದಿನ ತಲೆಮಾರಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಾಲಿನ ಡೇರಿಗಳನ್ನು ಉಳಿಸಿ ಬೆಳಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಮಮತಾಶೆಟ್ಟಿ,ಮನ್ಮುಲ್ ಮಾರ್ಗ ವಿಸ್ತರಣಾಧಿಕಾರಿಗಳಾದ ಶಿವಶಂಕರ್, ನಾಗಪ್ಪ, ಗುರುರಾಜ್ ಸುರುಗೀಹಳ್ಳಿ, ಮುಖಂಡರಾದ ರಾಯಪ್ಪ,ಗ್ರಾ.ಪಂ.ಸದಸ್ಯ ಶ್ರೀನಿವಾಸ್, ಸಂಘದ ಅಧ್ಯಕ್ಷೆ ಪದ್ಮ,ಉಪಾಧ್ಯಕ್ಷೆ ಭಾಗ್ಯಮ್ಮ, ಸಂಘದ ನಿರ್ದೇಶಕರಾದ ಕಾಂತಾಮಣಿ,ಜಯಲಕ್ಷ್ಮಿ, ಮಂಜುಳಾ,ಮೀನಾಕ್ಷಿ,ಪದ್ಮಮ್ಮ,ಮಂಜುಳಮ್ಮ,ಮಹದೇವಮ್ಮ,ಕಾಳಮ್ಮ,ಕೋಮಲ,ಸಂಘದ ಕಾರ್ಯದರ್ಶಿ ಸೌಮ್ಯ,ಹಾಲು ಪರೀಕ್ಷಕಿ ಸೌಮ್ಯ,ಸಂಸ್ಥಾಪಕ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!