Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೀಡಿ ಕಾರ್ಮಿಕರ ಗೋಳು ಆಲಿಸದ ಸರ್ಕಾರ: ನಾಚಿಕೆ ಆಗಬೇಕು ಎಂದ ಜನರು

ಮಂಡ್ಯ ಕೆರೆ ಅಂಗಳದ ದಲ್ಲಿರುವ ಬೀಡಿ ಕಾರ್ಮಿಕರ ಕಾಲೋನಿ ನಿವಾಸಿಗಳು ಮಳೆ ಬಂದರೆ ಸಾಕು, ಭಯದಿಂದ ಬೆಚ್ಚುತ್ತಾರೆ. ಅವರ ಬದುಕು ದುಸ್ತರವಾಗುತ್ತದೆ ಊಟ ನಿದ್ದೆ ಎಲ್ಲವೂ ಮರೀಚಿಕೆಯಾಗುತ್ತದೆ.

ಪ್ರತಿ ಬಾರಿ ಧಾರಾಕಾರ ಮಳೆ ಸುರಿದಾಗಲೂ ಬೀಡಿ ಕಾರ್ಮಿಕರ ಕಾಲೋನಿ ಸಂಪೂರ್ಣ ಜಲಾವೃತವಾಗುತ್ತದೆ. ನಾಲ್ಕರಿಂದ ಐದು ಅಡಿ ನೀರು ನಿಂತು ಮನೆಗಳಿಗೆ ನುಗ್ಗುತ್ತದೆ‌‌. ದಿನವಿಡೀ ಜನರು ಊಟ, ನಿದ್ದೆ ಬಿಟ್ಟು ಜಾಗರಣೆ ಮಾಡಬೇಕಾಗುತ್ತದೆ. ವಾಸ್ತವ ಪರಿಸ್ಥಿತಿ ಹೀಗಿದ್ದರೂ ಸಹ ಸರ್ಕಾರ, ಜನಪ್ರತಿನಿಧಿಗಳು ಇವರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿರುವುದು ನಾಚಿಕೆಗೇಡಿನ ಸಂಗತಿ.

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಮತ್ತೊಮ್ಮೆ ಬೀಡಿ ಕಾರ್ಮಿಕರ ಕಾಲೋನಿ ಸಂಪೂರ್ಣ ನೀರಿನಿಂದ ಮುಳುಗಿಹೋಗಿದೆ. ಜನರು ಊಟ ನಿದ್ರೆ ಇಲ್ಲದೆ ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಈ ಕಾಲೋನಿಯ ಸಹವಾಸವೇ ಸಾಕಪ್ಪ ಎಂದು ಮನೆಗೆ ಬೀಗ ಹಾಕಿಕೊಂಡು ಮಕ್ಕಳು ಮರಿಗಳೊಂದಿಗೆ ತಮ್ಮ ಸಂಬಂಧಿಕರ ಮನೆ ಸೇರಿದ್ದಾರೆ. ಮಳೆ ನೀರು ಮನೆಗೆ ನುಗ್ಗಿರುವ ಕಾರಣದಿಂದ ವೃದ್ಧರು, ರೋಗ ಪೀಡಿತರನ್ನು, ಚಿಕ್ಕ ಮಕ್ಕಳನ್ನು ತೆಪ್ಪ, ಟ್ರಾಕ್ಟರ್ ಗಳ ಮೂಲಕ ಕರೆತರುತ್ತಿದ್ದರೆ ಎಂತಹವರ ಮನದಲ್ಲೂ ಸರ್ಕಾರದ ಬಗ್ಗೆ ಸಿಟ್ಟು ಬರುತ್ತಿತ್ತು.ಇನ್ನು ಕೆಲವರು ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಶಾಪ ಹಾಕಿಕೊಂಡು ಹೇಗೋ ಜೀವನ ದೂಡುತ್ತಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಶಾಸಕ ಎಂ.ಶ್ರೀನಿವಾಸ್ ಮಳೆ ಬಂದಾಗ ಹೋಗಿ ಒಂದೆರಡು ಭರವಸೆ ಕೊಟ್ಟು ಕೈಗೊಂದಿಷ್ಟು ಪರಿಹಾರ ನೀಡಿ ಸುಮ್ಮನಾಗುತ್ತಾರೆ. ಮತ್ತೆ ಇವರಿಗೆ ಇಲ್ಲಿನ ನಿವಾಸಿಗಳು ನೆನಪಾಗುವುದು ಮತ್ತೊಮ್ಮೆ ಧಾರಾಕಾರ ಮಳೆ ಸುರಿದಾಗ ಶಾಶ್ವತ ಪರಿಹಾರ ಬೇಕು.

ಪ್ರತಿ ಮಳೆ ಬಂದಾಗಲೂ ಬೀಡಿ ಕಾರ್ಮಿಕರ ಕಾಲೋನಿ, ಜಲಾವೃತವಾಗುತ್ತದೆ. ಜನರು ಬಹಳ ಕಷ್ಟದಿಂದ ಮಳೆಯಲ್ಲಿ ಜೀವನ ನಡೆಸಬೇಕಾದ ಸ್ಥಿತಿ ಇದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಹೋದ ಪುಟ್ಟ ಬಂದ ಪುಟ್ಟ ಎಂಬಂತೆ ಮಳೆ ಬಂದ ಸಂದರ್ಭದಲ್ಲಿ ಬಂದು ಪರಿಹಾರ ನೀಡಿ ಹೋಗುತ್ತಾರೆ. ಮೊದಲು ಬೀಡಿ ಕಾಲೋನಿ ಸೇರಿದಂತೆ ಕೆರೆ ಅಂಗಳದಲ್ಲಿ ವಿಶಾಲವಾದ ಚರಂಡಿಯನ್ನು ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ತೆಗೆದುಕೊಳ್ಳಬೇಕಿದೆ.

ಮೊದಲು ಕೆರೆಯನ್ನು ಮುಚ್ಚಿಸಿರುವುದೇ ದೊಡ್ಡ ತಪ್ಪು, ಮನುಷ್ಯ ದುರಾಸೆಯಿಂದ ಕೆರೆ ಮುಚ್ಚಿದ್ದಾರೆ. ಆದ್ದರಿಂದ ಕೆರೆಗೆ ಸೇರಬೇಕಾದ ನೀರು ಮನೆಗಳಿಗೆ ನುಗ್ಗುತ್ತಿದೆ. ಸರ್ಕಾರ ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಕೆರೆಯಂಗಳದ ನಿವಾಸಿ ಇಂಜಿನಿಯರ್ ಅಶ್ವಥ್ ರಾವ್ ಮನವಿ ಮಾಡಿದರು.

ಕಣ್ಣಲ್ಲಿ ನೀರು ಬರುತ್ತದೆ

ಪ್ರತಿ ಮಳೆ ಬಂದಾಗಲೂ ಜನರು ಊಟ, ನಿದ್ರೆ ಬಿಟ್ಟು ಜೀವಿಸುವ ಪರಿಸ್ಥಿತಿ ಉದ್ಭವವಾಗುತ್ತದೆ. ಚಿಕ್ಕ ಮಕ್ಕಳಿಗೆ ಹಾಲು ಆಹಾರ ನೀಡುವುದಕ್ಕೂ ಸಾಧ್ಯವಾಗುವುದಿಲ್ಲ. ಇದನ್ನು ನೋಡಿದರೆ ನಮ್ಮ ಕಣ್ಣಲ್ಲಿ ನೀರು ಬರುತ್ತದೆ. ದಯವಿಟ್ಟು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳು ಇಲ್ಲಿಗೆ ಬಂದು ಜನರ ವಾಸ್ತವ ಸ್ಥಿತಿಯನ್ನು ಕಣ್ಣಾರೆ ನೋಡಿ ಈ ಜನರಿಗೆ ಶಾಶ್ವತವಾದ ಪರಿಹಾರ ನೀಡಬೇಕು ಎಂದು ಬೀಡಿ ಕಾರ್ಮಿಕ ಕಾಲೋನಿಯ ಮುದಾಸಿರ್ ಹೇಳಿದರು..

ಸರ್ಕಾರಕ್ಕೆ ಕಣ್ಣಿಲ್ಲ

14 ವರ್ಷಗಳಿಂದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದೇವೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿಯ ಪರಿಸ್ಥಿತಿ ನಮಗೆ ಬರುತ್ತದೆ. ಯಾಕಾದರೂ ಈ ಕಾಲೋನಿಗೆ ಬಂದು ಸೇರಿದೆವೋ ಎಂದು ಅನಿಸುತ್ತದೆ.

ನಾವು ಬೆಳಿಗ್ಗೆಯಿಂದ ತಿಂಡಿ ತಿಂದಿಲ್ಲ, ಮನೆ ಒಳಗೆ ನೀರು ತುಂಬಿರುವುದರಿಂದ ಮಕ್ಕಳಿಗೆ ತಿಂಡಿ ಕೂಡ ಮಾಡಲು ಆಗಿಲ್ಲ. ಈ ವರ್ಷದಲ್ಲಿ ಮೂರನೇ ಬಾರಿ ಇಂತಹ ಸ್ಥಿತಿ ನಮಗೆ ಬಂದಾಗಿದೆ. ಶಾಸಕರು, ಸಚಿವರು,

ತಹಶೀಲ್ದಾರ್, ಎಲ್ಲರೂ ಬಂದು ಕಳೆದ ಬಾರಿ 10,000 ಪರಿಹಾರ ನೀಡಿ ಹೋದರು. 10,000 ಹಣ ಮಳೆಯಿಂದ ಹಾನಿಗೆ ಸಾಕಾಗುವುದಿಲ್ಲ.ಈ ಸರ್ಕಾರಕ್ಕೆ ಕಣ್ಣಿಲ್ಲ ನಮ್ಮನ್ನು ಮನುಷ್ಯರನ್ನಾಗಿ ನೋಡುತ್ತಿಲ್ಲ ಎಂದು ನಿವಾಸಿ ಸಲೀಂ ಪಾಷಾ ನೋವಿನಿಂದ ನುಡಿದರು.

ಕೆರೆ ಕೋಡಿ ಒಡೆದು ಬೀಡಿ ಕಾರ್ಮಿಕರ ಕಾಲೋನಿಯ ನಿವಾಸಿಗಳು ಈ ವರ್ಷದಲ್ಲಿ ಮೂರನೇ ಬಾರಿ ಮಳೆಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ, ಮಕ್ಕಳು-ಮರಿಗಳನ್ನು ನೋಡಲಾಗುತ್ತಿಲ್ಲ. ಸರ್ಕಾರ ಕೂಡಲೇ ಇಲ್ಲಿಯ ನಿವಾಸಿಗಳಿಗೆ ಪರಿಹಾರ ಧನ ವಿತರಿಸಬೇಕು. ನಿಂತಿರುವ ಮಳೆ ನೀರನ್ನು ಖಾಲಿ ಮಾಡಿಸಿ ಕೊಡಬೇಕು.

ಚಿಕ್ಕ ಮಂಡ್ಯ ಬಳಿ ಇರುವ ಕೆರೆಯ ಕೋಡಿಯನ್ನು ಸರಿ ಮಾಡಬೇಕು. ರೈತರಿಗೆ ಬೇಕಾದರೆ ಪ್ರತ್ಯೇಕ ಪೈಪು ಹಾಕಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಲಿ, ಇಲ್ಲದಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಗೋಬಿ ವ್ಯಾಪಾರಿ ಪ್ರಕಾಶ್ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!