Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಾಧಿಕಾರದ ಆದೇಶ ಖಂಡಿಸಿ ರೈತಸಂಘದಿಂದ ಬೆಂ-ಮೈ ಹೆದ್ದಾರಿ ತಡೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಸಮಿತಿಯ ಅವೈಜ್ಞಾನಿಕ ಆದೇಶವನ್ನು ಖಂಡಿಸಿ ಸೆ. 29ರಂದು ಜನ-ಜಾನುವಾರುಗಳೊಂದಿಗೆ ಹೆದ್ದಾರಿ ಮತ್ತು ರೈಲು ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ತಿಳಿಸಿದರು.

ಮಂಡ್ಯ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನಗಾಣದೆ ಕೇವಲ ಅಂಕಿ ಅಂಶಗಳ ಆಧಾರದ ಮೇಲೆ ಅವೈಜ್ಞಾನಿಕ ತೀರ್ಪು ನೀಡುತ್ತಿದೆ ಎಂದು ಆರೋಪಿಸಿದರು.

ಪ್ರಾಧಿಕಾರ ಮತ್ತು ನಿರ್ವಹಣಾ ಸಮಿತಿ ನೀಡುವ ಆದೇಶವನ್ನು ಪ್ರಶ್ನಿಸುವ ಮನೋಭಾವವಿಲ್ಲದ ರಾಜ್ಯ ಸರ್ಕಾರ 25 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ತಮಿಳುನಾಡು ಕೇಳಿದರೆ, ಕರ್ನಾಟಕ 10 ಸಾವಿರ ಕ್ಯೂಸೆಕ್ ನೀರು ಹರಿಸುವುದಾಗಿ ಒಪ್ಪಂದಕ್ಕೆ ಮುಂದಾಗುತ್ತದೆ. ಇದು ಯಾವ ನ್ಯಾಯ ಎಂದ ಅವರು, ನಮ್ಮಲ್ಲಿ ನೀರಿಲ್ಲ, ನಾವು ಈ ಬಾರಿ ನೀರು ಕೊಡಲಾಗದು ಎಂಬ ಕಟು ಸತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯದ ಕಾನೂನು ತಂಡ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2022ರ ಮಾನ್‌ಸೂನ್‌ನ ಜೂನ್ ತಿಂಗಳಲ್ಲಿ 64 ಟಿಎಂಸಿ, ಜುಲೈನಲ್ಲಿ 97.1 ಟಿಎಂಸಿ, ಆಗಸ್ಟ್‌ನಲ್ಲಿ 105 ಟಿಎಂಸಿ ಹಾಗೂ ಸೆಪ್ಟೆಂಬರ್‌ನಲ್ಲಿ 42.48 ಟಿಎಂಸಿ ನೀರು ಸೇರಿದಂತೆ 300 ಟಿಎಂಸಿಗೂ ಹೆಚ್ಚು ನೀರು ಹರಿದುಬಂದಿತ್ತು. ಆದರೆ ಈ ಬಾರಿಯ ಮುಂಗಾರು ಹಂಗಾಮಿನ ಜೂನ್ ತಿಂಗಳಲ್ಲಿ 2.87 ಟಿಎಂಸಿ, ಜುಲೈನಲ್ಲಿ 29.14 ಟಿಎಂಸಿ, ಆಗಸ್ಟ್‌ನಲ್ಲಿ 10.65 ಟಿಎಂಸಿ, ಸೆಪ್ಟೆಂಬರ್‌ನಲ್ಲಿ 9.9ಟಿಎಂಸಿ ಸೇರಿದಂತೆ ಒಟ್ಟಾರೆ 52.56 ಟಿಎಂಸಿ ನೀರು ಬಂದಿದೆ. ಇಂತಹ ಸ್ಥಿತಿಯಲ್ಲಿ ನಾವು ತಮಿಳುನಾಡಿಗೆ ನೀರು ಕೊಡಲು ಹೇಗೆ ಸಾಧ್ಯ ಎಂಬ ಸಾಮಾನ್ಯ ಜ್ಞಾನವನ್ನು ರೈತರು ಬೆಳಸಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಕಾನೂನು ತಂಡ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಕಳೆದ ಬಾರಿ ತಮಿಳುನಾಡಿಗೆ ನಾವು ಕೊಡುವುದಕ್ಕಿಂತಲೂ 115 ಟಿಎಂಸಿ ಹೆಚ್ಚುವರಿಯಾಗಿ ನೀಡಲಾಗಿದೆ. ಬಿಳಿಗುಂಡ್ಲು ಮಾಪನಾ ಕೇಂದ್ರದಲ್ಲಿ ಇನ್ನೂ ಹೆಚ್ಚಿನ ಟಿಎಂಸಿ ನೀರು ಹರಿದುಹೋಗಿರುವ ಮಾಹಿತಿ ಇದೆ. ನೀರು ಸಂಗ್ರಹಿಸಲು ಮೇಕೆದಾಟು ಯೋಜನೆಗೂ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಕಾನೂನು ತಂಡ ಸರಿಯಾದ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರ, ಸಮಿತಿಗೆ ನೀಡುವಲ್ಲಿ ಏಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ತಮಿಳುನಾಡಿನವರು ಕರ್ನಾಟಕಕ್ಕೆ ಕಿರುಕುಳ ನೀಡುತ್ತಲೇ ಬಂದಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ಯಾವ ಸೂತ್ರವನ್ನು ಅನುಸರಿಸಬೇಕು ಎಂಬ ಬಗ್ಗೆ ಈವರೆವಿಗೂ ಚಿಂತನೆ ನಡೆಸಿಲ್ಲ ಎಂದು ಆರೋಪಿಸಿದರು.

ಕಾವೇರಿ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರಗಳಲ್ಲಿ ವಾದ ಮಂಡಿಸಲು ಕೋಟ್ಯಾಂತರ ರೂ.ಗಳನ್ನು ಕಾನೂನು ತಂಡಗಳಿಗಾಗಿ ರಾಜ್ಯ ಸರ್ಕಾರ ವೆಚ್ಚ ಮಾಡಿದೆ. ಆದರೂ ನಮಗೆ ಸರಿಯಾದ ನ್ಯಾಯ ಸಿಕ್ಕಿಲ್ಲ. ಒಂದು ಕಡೆ ನ್ಯಾಯಮೂರ್ತಿಗಳೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಸೆ. 29ರಂದು ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರ ಬಳಿ ಮೈಸೂರು-ಬೆಂಗಳೂರು ಹೆದ್ದಾರಿ ತಡೆ ಹಾಗೂ ಗೆಜ್ಜಲಗೆರೆ ಬಳಿ ರೈಲು ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಲಿಂಗಪ್ಪಾಜಿ, ಬಾಲಕೃಷ್ಣ, ಶಿವಳ್ಳಿ ಚಂದ್ರು, ಉಮೇಶ, ಪಾಂಡು ಇತರರು ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!