Thursday, September 19, 2024

ಪ್ರಾಯೋಗಿಕ ಆವೃತ್ತಿ

ಅವಕಾಶ ಬಳಸಿಕೊಂಡು ಸಾಧನೆ ಮಾಡುವುದು ಕರ್ತವ್ಯವಾಗಬೇಕು: ಉದಯ್

ಮನುಷ್ಯನಿಗೆ ಹಲವಾರು ಅವಕಾಶಗಳು ಸಿಗಲಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಾಧನೆ ಮಾಡುವುದು ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕರ್ತವ್ಯವೆಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.

ಮದ್ದೂರು ಪಟ್ಟಣದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ಪರಮ ಪೂಜ್ಯ, ಜಗದ್ಗುರು ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ 79ನೇ ಜಯಂತೋತ್ಸವ ಮತ್ತು ‘ಬಿಜಿಎಸ್ ಆಡಳಿತ ಶ್ರೀಸೇವಾ ರತ್ನ ಪ್ರಶಸ್ತಿ’ ಪ್ರದಾನ ಹಾಗೂ ಬಿಜಿಎಸ್ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಳಗಾವಿ, ಬೆಂಗಳೂರು, ಹುಬ್ಬಳಿ ಮತ್ತು ಎಸಿಬಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಕರ್ತವ್ಯ ಏನೆಂಬುದನ್ನು ರವಿಕಾಂತೇಗೌಡ ಅವರು ತೋರಿಸಿಕೊಟ್ಟಿದ್ದು ಶ್ರದ್ದೆ, ಪ್ರಾಮಾಣಿಕತೆ, ನಿಷ್ಟೆಯಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಗೌರವ ತಾನಾಗೆ ಬರಲಿದ್ದು ಅದಕ್ಕೆ ಇವರೇ ಉದಾಹರಣೆ ಎಂದರು.

ಜಗದ್ಗುರು ಬಾಲಗಂಗಾಧರ ಶ್ರೀಗಳು ನಿರ್ಮಾಣ ಮಾಡಿರುವ ಆದಿಚುಂಚನಗಿರಿ ಮಠ ವಿಶ್ವದಲ್ಲೇ ಮಾನ್ಯತೆ ಗಳಿಸಿದ್ದು ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನದಾಸೋಹ ಹಾಗೂ ಆರೋಗ್ಯವನ್ನು ನೀಡುವ ಮೂಲಕ ಎಲ್ಲರ ಮನಸ್ಸಲ್ಲೂ ಚಿರಸ್ಥಾಯಿಯಾಗಿ ಉಳಿದಿದ್ದು ಇಂದಿಗೂ ಒಂದುವರೆ ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯವೆಂದರು.

ಕ್ರೀಡೆ, ಸಾಂಸ್ಕೃತಿಕ, ಸಂಸ್ಕೃತಿ, ವಿಜ್ಞಾನ ವಸ್ತು ಪ್ರದರ್ಶನ ಇನ್ನಿತರೆಗಳಲ್ಲಿ ಸಾಧನೆ ಮಾಡುವಲ್ಲಿ ಕ್ಷೇತ್ರವು ಮುಂಚೂಣಿ ಸ್ಥಾನದಲ್ಲಿದ್ದು ಬಡವರ್ಗದ ಜನರಿಗೆ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದರು.

ಮದ್ದೂರು ತಾಲೂಕು ಹಲವಾರು ನಾಯಕರನ್ನು ನೀಡಿದ್ದು ಎಚ್.ಕೆ. ವೀರಣ್ಣಗೌಡ, ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ, ಜಿ. ಮಾದೇಗೌಡ, ಮಂಚೇಗೌಡ, ಅಂಬರೀಷ್, ಎಂ.ಎಸ್. ಸಿದ್ದರಾಜು ರಂತಹ ನಾಯಕರನ್ನು ನೀಡುವ ಮೂಲಕ ಜಿಲ್ಲೆಗೆ ತಾಲೂಕು ವಿಶೇಷತೆಯನ್ನು ಹೊಂದಿದೆ ಎಂದು ಬಣ್ಣಿಸಿದರು.

ಬೆಂಗಳೂರು ಆರಕ್ಷಕ ಮಹಾ ನೀರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಅವರಿಗೆ ‘ಬಿಜಿಎಸ್ ಆಡಳಿತ ಶ್ರೀಸೇವಾ ರತ್ನ ಪ್ರಶಸ್ತಿ’ಯನ್ನು ಕೃಷಿಕ ಫೌಂಡೇಷನ್ ಹಾಗೂ ಜಾನಪದ ಲೋಕ ಅಧ್ಯಕ್ಷ ಟಿ. ತಿಮ್ಮೇಗೌಡ ಪ್ರಶಸ್ತಿ ಪ್ರಧಾನ ನೆರವೇರಿಸಿ ಮಾತನಾಡಿದರು.

ಸಮಾಜದ ಋಣಭಾರ ಇರಬೇಕು

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರು ಆರಕ್ಷಕ ಮಹಾ ನೀರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಕೃತಜ್ಞತೆ ಜತೆಗೆ ಸಮಾಜದ ಋಣಭಾರ ಇರಬೇಕು ಆದರೆ ಕೆಲ ಅಧಿಕಾರಿಗಳ ಸಮಾಜದ ಋಣಭಾರ ತೀರಿಸುವ ಅವಕಾಶದ ಮನೋಭಾವನೆ ಇಲ್ಲದಿರುವುದು ಬೇಸರದ ಸಂಗತಿ ಎಂದರು.

ಕಾನೂನಿನ ಚೌಕಟ್ಟಿನಡಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕಾಗಿದ್ದು ಕೆಲ ಅಧಿಕಾರಿಗಳಿಗೆ ಪ್ರಚಾರದ ಹುಚ್ಚು ಇದ್ದು ಇದರಿಂದಾಗಿ ಆಡಳಿತ ಕ್ಷೇತ್ರಕ್ಕೆ ಇರುವ ತೊಡಕ್ಕುಂಟಾಗಲಿದ್ದು ಶ್ರದ್ದೆ, ಪ್ರಾಮಾಣಿಕತೆ, ನಿಷ್ಠೆಯಿಂದ ಮತ್ತು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಹುದ್ದೆಗಳನ್ನು ನಿಭಾಯಿಸಬೇಕೆಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶಗೌಡ ಪ್ರಶಸ್ತಿ ಪುರಸ್ಕೃತರನ್ನು ಕುರಿತು ಮಾತನಾಡಿದರು.
ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ. ಬಿ. ಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಕ್ರಮದ ವೇಳೆ ಸಂಘಟನೆ ಗೌರವಾಧ್ಯಕ್ಷ ಎಚ್.ಆರ್. ಅನಂತೇಗೌಡ, ಬಿಇಓ ಸಿ.ಎಚ್. ಕಾಳೀರಯ್ಯ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಪಿ. ಶಿವಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಿ.ಆರ್. ಯೋಗೇಶ್‌ಕನ್ಯಾಡಿ, ಮುಖಂಡ ದೇಶಹಳ್ಳಿ ಆರ್. ಮೋಹನ್‌ಕುಮಾರ್, ಪದಾಧಿಕಾರಿಗಳಾದ ರವಿಕುಮಾರ್, ತಿಪ್ಪೂರು ರಾಜೇಶ್, ಶಿವರಾಮು, ಸುರೇಶ್, ಶಿವಕುಮಾರ್, ಮಾರಸಿಂಗನಹಳ್ಳಿ ರಾಮಚಂದ್ರು, ಸಂಸ್ಥೆ ಅಧ್ಯಕ್ಷೆ ಪಿ. ಕಸ್ತೂರಿ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!