ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರು ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದ ಲಕ್ಷ್ಮೀದೇವಿ ದೇವಾಲಯ ಪುನರ್ ಪ್ರತಿಷ್ಠಾಪನ ಮಹೋತ್ಸವ ಭಕ್ತಿ-ಭಾವದಿಂದ ನೆರವೇರಿತು.
ಭಾನುವಾರ ಇಂದು ಅಣ್ಣೂರಿಗೆ ಜನ ಸಾಗರವೇ ಹರಿದು ಬಂದಿತ್ತು. ಸಹಸ್ರಾರು ಭಕ್ತರು ಲಕ್ಷ್ಮಿ ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.
ಗ್ರಾಮದ ದೇವರುಗಳಾದ ಶ್ರೀ ವೆಂಕಟೇಶ್ವರ, ಶ್ರೀ ಮಹಾಕಾಳಮ್ಮ, ಶ್ರೀ ಮಾರಮ್ಮ, ಶ್ರೀ ಅಮೃತೇಶ್ವರ, ಶ್ರೀ ಸಿದ್ದೇಶ್ವರ, ಶ್ರೀ ಅಟ್ಟಿಮಾರಮ್ಮ, ಬೊಪ್ಪಸಮುದ್ರ ಶ್ರೀ ಚೌಡಮ್ಮ ದೇವರುಗಳನ್ನು ಗ್ರಾಮದ ಬೀದಿಗಳಲ್ಲಿ ತಮಟೆ, ನಗಾರಿ, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಗ್ರಾಮದ ಪುಟ್ಟಕಟ್ಟೆಯಲ್ಲಿ ಗಂಗಾ ಪೂಜೆ ಮಾಡಲಾಯಿತು.
ದೇವರುಗಳ ಅಗ್ರಪೂಜೆಯ ನಂತರ ಮಹಾಲಕ್ಷ್ಮಿ ದೇವಾಲಯಕ್ಕೆ ಶಾಶ್ವತ್ ಎಂಬುವವರನ್ನು ದೇವಾಲಯದ ಗುಡ್ಡಪ್ಪನನ್ನಾಗಿ ನೇಮಿಸಿಕೊಳ್ಳಲಾಯಿತು.
ದೇವಾಲಯದ ಆವರಣದಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯದಲ್ಲಿ ಬೂಂದಿ ಪಾಯಸ, ತಗಣಿ ಕಾಳಿನ ಕೂಟು, ಅನ್ನ ಸಾಂಬಾರು ಉಣ ಬಡಿಸಲಾಯಿತು.ಹದಿನೈದು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಶಾಸಕ ಡಿ.ಸಿ. ತಮ್ಮಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ. ಮಾದೇಗೌಡ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಯುವ ಮುಖಂಡ ವಿನಯ್ ರಾಮಕೃಷ್ಣ, ಜಿ.ಪಂ. ಮಾಜಿ ಸದಸ್ಯ ಎ.ಎಸ್. ರಾಜೀವ್, ದೇವಾಲಯ ಸಮಿತಿ ಅಧ್ಯಕ್ಷ ಜಿ.ಟಿ. ನಾರಾಯಣಸ್ವಾಮಿ, ಮುಖಂಡರಾದ ಸ್ವಾಮಿ, ತಮ್ಮಣ್ಣ, ಶೇಖರ ಸೇರಿದಂತೆ ಹಲವರು ಉತ್ಸವದಲ್ಲಿ ಪಾಲ್ಗೊಂಡಿದ್ದರು.