Friday, September 20, 2024

ಪ್ರಾಯೋಗಿಕ ಆವೃತ್ತಿ

ಭಾರತ್ ಜೋಡೋ ಯಾತ್ರೆಗೆ ದಸಂಸ ಬೆಂಬಲ

ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಸಮನ್ವಯ ಸಮಿತಿಯು (ದಸಂಸ ಒಕ್ಕೂಟ) ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಗೆ ಬೆಂಬಲ ವ್ಯಕ್ತಪಡಿಸುತ್ತದೆ. ಹಾಗೂ ದಸಂಸ ಕಾರ್ಯಕರ್ತರೂ ಕೂಡ ಪಾದ ಯಾತ್ರೆ ನಡೆಯುವ ಆಯಾ ಹೋಬಳಿ,ತಾಲ್ಲೂಕುಗಳಲ್ಲಿ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಸೆ.28ರಂದು ಬೆಂಗಳೂರಿನಲ್ಲಿ ನಡೆದ ದಸಂಸ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ್ದ ಸುಮಾರು ಹಲವು ದಸಂಸ ಸಂಘಟನೆಗಳು ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಇವತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರದ ಆಡಳಿತ ನಡೆಯುತ್ತಿದೆ. ಈ ಸರ್ವಾಧಿಕಾರವನ್ನು ಇಂದು ಪ್ರಶ್ನಿಸುವಂತಿಲ್ಲ, ಪ್ರಭುತ್ವದ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಜೈಲಿಗಟ್ಟಲಾಗುತ್ತಿದೆ. ಸಂಸತ್ತು, ಸದನದಲ್ಲಿ ದನಿ ಎತ್ತುವ ಪ್ರತಿಪಕ್ಷಗಳನ್ನು ಹತ್ತಿಕ್ಕಲಾಗುತ್ತಿದೆ. ವಿರೋಧಪಕ್ಷಗಳಿಲ್ಲದ ಆಡಳಿತ ಪಕ್ಷವಿರಬೇಕೆನ್ನುವುದು ಇಂದಿನ ಪ್ರಭುತ್ವದ ನೀತಿಯಾಗಿದೆ. ಇದು ಜನತಂತ್ರ ವ್ಯವಸ್ಥೆಗೆ ಮಾರಕವಾದುದ್ದಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಈ ಸಂದರ್ಭದಲ್ಲಿ ದೇಶ ಎಲ್ಲಾ ರಂಗಗಳಲ್ಲೂ ಅಧಃಪತನದತ್ತ ಸಾಗುತ್ತಿದೆ. ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಸಮಾನತೆ- ಸಾಮಾಜಿಕ ನ್ಯಾಯ ಕನಸಿನ ಗಂಟಾಗಿದೆ, ನಿರುದ್ಯೋಗ ಯುವ ಜನಾಂಗವನ್ನು ಹತಾಶೆಗೆ ದೂಡಿದೆ. ಕೋಮು ರಾಜಕೀಯ ವಿಜೃಂಭಿಸುತ್ತಿದೆ. ನ್ಯಾಯ ಕೇಳುವವರು ದೇಶದ್ರೋಹಿಗಳಾಗುತ್ತಿದ್ದಾರೆ. ಪ್ರಗತಿಪರತೆ, ಜ್ಯಾತ್ಯಾತೀತೆ ಅಪಹಾಸ್ಯಕ್ಕೊಳಗಾಗುತ್ತಿವೆ.

ಸಮ ಸಮಾಜದ ಕನಸು ಬಿತ್ತಿದ ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಮರೆಯಾಗಿ ಕೋಮು ವಿಷದ ಗೋಡ್ಸೆ, ಸಾವರ್ಕರ್ ಗಳು ಮುನ್ನೆಲೆಗೆ ಬರುತ್ತಿದ್ದಾರೆ. ಇಡೀ ದೇಶ ಕೋಮು ನಂಜಿನ ಮಾಯಾಜಾಲದೊಳಗೆ ಅರಿವನ್ನೇ ಮರೆತು ಮತಿಭ್ರಮಣೆಗೊಳಗಾದಂತೆ ವರ್ತಿಸುತ್ತಿದೆ. ಸಾವಿರಾರು ವರ್ಷಗಳಿಂದ ಇಡೀ ಭಾರತೀಯ ಸಮಾಜವನ್ನು ತುಳಿದು ಆಳಿದ ಬ್ರಾಹ್ಮಣ್ಯ ಮತ್ತೆ ತನ್ನ ಕರಾಳ ಹಿಡಿತವನ್ನು ಸಾಧಿಸಿ ಸಂವಿಧಾನ,ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಿ ಉಸಿರುಗಟ್ಟಿಸುತ್ತಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ಭಾರತ ಐಕ್ಯತೆ ಯಾತ್ರೆ ನಡೆಸುವುದರ ಮೂಲಕ ಜಾತಿ, ಧರ್ಮ,ದೇವರು,ಭಾಷೆ ಹೆಸರಿನಲ್ಲಿ ಪರಸ್ಪರ ಅನುಮಾನ, ದ್ವೇಷ- ಅಸೂಯೆಯ ಭಾವನೆ ಹೊಂದಿ ಛಿದ್ರಗೊಂಡಿರುವ ಭಾರತ ದೇಶವನ್ನು ಒಗ್ಗೂಡಿಸಲು ಹೊರಟಿದ್ದಾರೆ ಎಂಬುದು ದಸಂಸ ಸಂಘಟನೆಗಳ ಅಭಿಪ್ರಾಯವಾಗಿದೆ.

ಹಾಗಾಗಿ ದಸಂಸ ಒಕ್ಕೂಟವು ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸುತ್ತಿದೆ. ನಾವು ಕಾಂಗ್ರೆಸ್ ಪಕ್ಷಕ್ಕಾಗಿ ಈ ಯಾತ್ರೆಗೆ ಬೆಂಬಲ ಸೂಚಿಸುತ್ತಿಲ್ಲ.ನಮ್ಮ ಬೆಂಬಲ ಜಾತಿ,ಧರ್ಮ,ದೇವರು, ಗಡಿ,ಭಾಷೆ ಮೊದಲಾದ ಭಾವನಾತ್ಮಕ ವಿಷಯಗಳಿಂದ ಭಾವೈಕ್ಯ ಭಾರತವನ್ನು ಒಡೆದು ಛಿದ್ರಗೊಳಿಸಿರುವ ಭಾರತವನ್ನು ಜೋಡಿಸುವುದಷ್ಟೆ. ಇಂತಹ ಕಾರ್ಯ ಯಾರೂ ಮಾಡಿದರೂ ನಮ್ಮ ಬೆಂಬಲವಿದೆ ಎಂದು ದಸಂಸ ಒಕ್ಕೂಟ ತೀರ್ಮಾನಿಸಿದ್ದು,ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದೆ ಎಂದು ದಸಂಸ ರಾಜ್ಯ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರಗೋಡು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!