ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಮೇಲೆ ಕಣ್ಣಿಲ್ಲ, ವಿರೋಧಪಕ್ಷದ ನಾಯಕ ಜನಸೇವಕ ಸಿದ್ದರಾಮಯ್ಯ ಅವರನ್ನೇ ಟಾರ್ಗೇಟ್ ಮಾಡಿಕೊಂಡಿದೆ ಅಂದರೆ, ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರ ಕೊಡುಗೆಗಳು, ಜನಪರ ಯೋಜನೆಗಳ ಬಗ್ಗೆ ಭಯ ಸುರುವಾಗಿದೆ ಎಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹೇಳಿದರು.
ಮಂಡ್ಯನಗರದ ಅಂಬೇಡ್ಕರ್ ಭವನದಲ್ಲಿ ಜನಸ್ನೇಹಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ-ಕನಕ ಜಯಂತೋತ್ಸವ, ಡಾ.ಪುನೀತ್ರಾಜ್ಕುಮಾರ್ ಮತ್ತು ವೀರಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಡಿನ ಜನತೆಗೆ ಬಿಜೆಪಿ ಸರ್ಕಾರ ರಚನೆಗೆ ಏಕೆ ಅಧಿಕಾರ ನೀಡಿದೇವೋ ಎನ್ನುವಷ್ಟು ಬೇಸರದಲ್ಲಿದ್ದಾರೆ, ಮುಂದಿನ ವಿಧಾನಸಭಾ ಚುನಾವಣೆವರೆಗೆ ಕಾದು ಬಿಜೆಪಿಗರಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಯುವ ಮುಖಂಡ ಸಾತನೂರು ಎನ್.ಮಹೇಶ್ ಒಂದು ಉತ್ತಮ ಸೇವಾ ಕಾರ್ಯವನ್ನು ಸಮಾಜ ನೀಡುತ್ತಿದ್ದಾರೆ, ಪದವೀಧರ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲಕರ ಪುಸ್ತಕಗಳನ್ನು ವಿತರಣೆ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಪ್ರಶಂಸಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ಧರೂಢ ಸತೀಶ್ಗೌಡ ಮಾತನಾಡಿ, ನಾಡು ಕಂಡ ಹೋರಾಟಗಾರ ಸಿದ್ದರಾಮಯ್ಯ. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಮಾನ ಅವಕಾಶ ನೀಡಿ ರಾಜ್ಯಾಡಳಿತ ನಡೆಸಿದರು, ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದರು, ಇಂದು ಜನರು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಆಡಳಿತದಲ್ಲಿ ನೀಡಿದ್ದ ಜನಪರ ಯೋಜನೆಗಳನ್ನು ಇಂದಿನ ಬಿಜೆಪಿ ಸರ್ಕಾರ ವಾಪಸ್ ಪಡೆದು ಹೊಸ ಹೆಸರುಗಳನ್ನು ಇಡುವ ಮೂಲಕ ಮತ್ತೆ ಜಾರಿ ಮಾಡುತ್ತಿರುವುದು ದುರಂತ ಎಂದು ಕಿಡಿಕಾರಿದರು.




