Thursday, May 16, 2024

ಪ್ರಾಯೋಗಿಕ ಆವೃತ್ತಿ

ವಚನ ಸಾಹಿತ್ಯ ಅಧ್ಯಯನದಿಂದ ವ್ಯಕ್ತಿತ್ವ ಬದಲಾವಣೆ : ರಘು ಕೌಟಿಲ್ಯ

ಶಿವಶರಣರ ವಚನಗಳನ್ನು ರಕ್ಷಣೆ ಮಾಡಿದ ವೀರ ಮಡಿವಾಳ ಮಾಚಿದೇವರ ಹೋರಾಟ ಅವಿಸ್ಮರಣೀಯ ವಾಗಿದೆ, ವಚನ ಸಾಹಿತ್ಯ ಅಧ್ಯಯನದಿಂದ ಮನುಷ್ಯನ ವ್ಯಕ್ತಿತ್ವದಲ್ಲಿ ಬದಲಾವಣೆ ಉಂಟಾಗಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಮೈಸೂರಿನ ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು.

ಮಂಡದಯ ನಗರದ ಕರ್ನಾಟಕ ಸಂಘದಲ್ಲಿ ಜಿಲ್ಲಾ ಮಡಿವಾಳ ಮಾಚಿದೇವರ ಸಂಘ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಮಡಿವಾಳ ಮಾಚಿದೇವರ ವಚನ ಗಾಯನೋತ್ಸವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ವಿರುದ್ದ ಶಿವಶರಣರೊಂದಿಗೆ ಮಡಿವಾಳ ಮಾಚಿದೇವರು ಹೋರಾಟ ನಡೆಸಿದ್ದು ಸಾದಾರಣ ವಿಚಾರವಲ್ಲ. ಇಂದಿನ ಆಧುನಿಕತೆ, ಶಿಕ್ಷಣ ಕಾಲಘಟ್ಟದಲ್ಲೂ ಜಾತಿವ್ಯವಸ್ಥೆ ವಿಪರೀತವಾಗಿದೆ, ಅಂತದ್ದರಲ್ಲಿ ಅಂದು ಇನ್ನೆಷ್ಟು ಹೆಚ್ಚಳವಾಗಿತ್ತು ಊಹಿಸಿ ಎಂದು ನುಡಿದರು.

ಸಾಮಾಜಿಕ ಕ್ರಾಂತಿಗೆ ಕಾರಣವಾದ ಬಸವಣ್ಣ ಅವರು, ಯಾವುದೇ ಜಾತಿ, ಮತ, ಪಂಥಗಳನ್ನೇಲ್ಲಾ ತೊರೆದು ಯಾರು, ಕಾಯಕವನ್ನು ಮಾಡಿದರೋ ಅವರು ಮಾತ್ರ ಶ್ರೇಷ್ಠರು. ಕಾಯಕವನ್ನು ಮಾಡುವುದಷ್ಟೇ ಅಲ್ಲ, ಮನುಷ್ಯ ಮನುಷ್ಯನಾಗಿ ಬದುಕುವುದಕ್ಕೆ ಏನು ಬೇಕು ಎನ್ನುವುದನ್ನು ವಚನ ಸಾಹಿತ್ಯ ಮೂಲಕ ಎಚ್ಚರಿಸಿದ್ದು ದೊಡ್ಡ ಸಾಧನೆಯಾಗಿದೆ ಎಂದರು.

ಮಡಿವಾಳ ಮಾಚಿದೇವರ ವಚನ ಗಾಯನೋತ್ಸವ ಸ್ಪರ್ಧೆ ಮಾಡುತ್ತಿರುವುದು ಶ್ಲಾಘನೀಯ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾರ್ಥಿಗಳು ಬಂದಿರುವುದು, ಇವರು ವಚನ ಸಾಹಿತ್ಯದ ಬಗ್ಗೆ ತಿಳಿದವರೇ ಆಗಿರುತ್ತಾರೆ, ಜಿಲ್ಲೆಯ ಜಿಲ್ಲಾ ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷರಾದ ವೆಂಕಟೇಶ್ ಅವರ ಶ್ರಮ, ಆಲೋಚನೆಗೆ ಎಲ್ಲರೂ ಶಕ್ತಿ ತುಂಬೋಣ ಎಂದು ಹೇಳಿದರು.

ವಚನ ಗಾಯನೋತ್ಸವ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ಸುಮಾರು 15 ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತರಿಗೆ ಗಣ್ಯರು ನಗದು ಬಹುಮಾನ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಶಿವಕುಮಾರ್ ಉಮ್ಮಡಹಳ್ಳಿ, ಜಿಲ್ಲಾ ಮಡಿವಾಳ ಮಾಚಿದೇವರ ಸಂಘದ ವೆಂಕಟೇಶ್‌ ಹಳವಾಡಿ, ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ನಾಗರಾಜು, ಹಾಪ್‌ಕಾಮ್ಸ್ ನಿರ್ದೇಶಕ ಡಿ.ನಾಗೇಶ್‌ ಹೊಸಹಳ್ಳಿ, ನಗರಸಭೆ ಸದಸ್ಯ ನಾಗೇಶ್, ನೌಕರರ ಸಹಕಾರ ಸಂಘದ ಸದಸ್ಯ ಸಂತೋಷ್, ಕಾರ್ಯಕ್ರಮ ಸಂಯೋಜಕ ಸೋಮಶೇಖರ್, ಜಾನಪದ-ತತ್ವಪದ ಗಾಯಕ ಗೊರವಾಲೆ ಚಂದ್ರಶೇಖರ್, ತೀರ್ಪುಗಾರರಾದ ಭೀಮಶಂಕರ್, ರವಿಕುಮಾರ್, ಪ್ರತೀಮಾ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!