ನಾ ಖಾವೂಂಗಾ… ನಾ ಖಾನೆದೂಂಗಾ ಇದು ಪ್ರಧಾನಿ ಮೋದಿಯವರ ಬಹು ದೊಡ್ಡ ಸ್ಲೋಗನ್. ಆದರೆ ಈ ಸ್ಲೋಗನ್ ಇರೋದು ಮಾತಲ್ಲಿ ಮಾತ್ರ. ಆದರೆ ಕೃತಿಯಲ್ಲಿ ಮಾತ್ರ ಇದೊಂದು ದೊಡ್ಡ ಸುಳ್ಳು ಸ್ಲೋಗನ್.
ಏಕೆಂದರೆ ಈ ದೇಶದಲ್ಲಿ ದೊಡ್ಡ ದೊಡ್ಡ ಹಗರಣ, ಭ್ರಷ್ಟಾಚಾರ ಮಾಡಿರುವ ಅನೇಕರು ಬಿಜೆಪಿ ವಾಷಿಂಗ್ ಮೆಷಿನ್ ನಲ್ಲಿ ಶುಭ್ರವಾಗಿ ಅವರ ಪಕ್ಷ ಸೇರಿ ಭ್ರಷ್ಟಾಚಾರ ಮುಕ್ತರಾಗಿ ಅಧಿಕಾರದಲ್ಲಿದ್ದಾರೆ.
ಗಣಿ ಹಗರಣದಲ್ಲಿ ಜೈಲು ಸೇರಿದ್ದ ಕರ್ನಾಟಕದ ಜನಾರ್ಧನ ರೆಡ್ಡಿ ಈಗ ಬಿಜೆಪಿ ವಾಷಿಂಗ್ ಮೆಷಿನ್ ಮೂಲಕ ಶುಭ್ರವಾಗಿದ್ದಾರೆ. ಅದೇ ರೀತಿ ಮಹಾರಾಷ್ಟ್ರದ ಅಜಿತ್ ಪವಾರ್ ಸುಮಾರು 70 ಸಾವಿರ ಕೋಟಿಗಳ ನೀರಾವರಿ ಹಗರಣದಲ್ಲಿ ಭಾಗಿಯಾಗಿದ್ದರು. ಅಜಿತ್ ಪವಾರ್ ಬಗ್ಗೆ ಮೋದಿಯವರು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಇಂತಹ ಭ್ರಷ್ಟಾಚಾರ ಮಾಡಿದವ ಜೈಲಿಗೆ ಸೇರಬೇಕಲ್ಲವೇ ಎಂದು ಭಾಷಣ ಮಾಡುತ್ತಿದ್ದರೆ, ಕಾರ್ಯಕರ್ತರು ಚಪ್ಪಾಳೆ ತಟ್ಟುತ್ತಾ ಜೈಲಿಗೆ ಹಾಕಿ ಎಂದು ಕೂಗುತ್ತಿದ್ದರು. ಇದಾದ ಕೇವಲ ಐದೇ ದಿನಕ್ಕೆ ಅಜಿತ್ ಪವಾರ್ ಶರದ್ ಪವಾರ್ ಅವರ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಒಡೆದು ಕೊಂಡು ಬಂದು ಬಿಜೆಪಿ ಸೇರಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಆಗುತ್ತಾರೆ.
ಅಸ್ಸಾಂನ ಹಿಮಂತ್ ಸಿನ್ಹಾ ಶರ್ಮ ಹೆಸರು ಬಂಗಾಳದ ಶಾರದ ಹಾಗೂ ನಾರದ ಚಿಟ್ ಫಂಡ್ ಹಗರಣದ ಹೆಸರಲ್ಲಿ ಕೇಳಿ ಬರುತ್ತದೆ. ಕೂಡಲೇ ಆತ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿ ಈಗ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣದ ಮುಕುಲ್ ರಾಯ್, ಸುವೇಂದು ಅಧಿಕಾರಿ, ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವ್ಹಾಣ್ ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಭಾಗಿಯಾಗಿದ್ದರು. ಈಗ ಅವರು ಬಿಜೆಪಿ ಸೇರಿ ರಾಜ್ಯಸಭಾ ಸದಸ್ಯರಾಗಿದ್ದಾರೆ.
ನಾರಾಯಣ ರಾಣೆ ಮಹಾರಾಷ್ಟ್ರ ಸಿಎಂ ಅಗಿದ್ದಾಗ ಮಾಡಿದ ಹಲವು ಹಗರಣದ ನಿವಾರಣೆಗೆ ಬಿಜೆಪಿ ಸೇರಿ ಕೇಂದ್ರ ಸಚಿವರಾದರು. ನವೀನ್ ಜಿಂದಾಲ್ ಕಬ್ಬಿಣ ಮತ್ತು ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾದ ಆರೋಪವಿತ್ತು. ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಅವರು ಈಗ ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿ. ಹೀಗೆ ಹೇಳುತ್ತಾ ಹೋದರೆ ಇನ್ನೂ ಹಲವಾರು ನಾಯಕರ ಹೆಸರು ಕೇಳಿ ಬರುತ್ತದೆ.ಆದರೆ ಅವರೆಲ್ಲ ಇಂದು ಬಿಜೆಪಿ ಸರ ಸೇರಿ ವಾಷಿಂಗ್ ಮೆಷಿನ್ ನಲ್ಲಿ ಭ್ರಷ್ಟಾಚಾರ ಮುಕ್ತವಾಗಿ ಶುಭ್ರವಾಗಿ ಕೊಳೆ ತೊಳೆದುಕೊಂಡು ಲಖ್ ಲಖಾ ಅಂತಾ ಹೊಳೆಯುತ್ತಿದ್ದಾರೆ.
ಭ್ರಷ್ಟಾಚಾರಿಗಳು,ಅತ್ಯಾಚಾರ ಆರೋಪ ಹೊತ್ತಿರುವವರಿಗೆ ಈಗ ಇರುವ ಏಕೈಕ ಆಯ್ಕೆ ಬಿಜೆಪಿ. ಬಿಜೆಪಿ ಸೇರಿದರೆ ಎಲ್ಲವನ್ನೂ ಮ್ಯಾನೇಜ್ ಮಾಡಬಹುದು ಎಂಬುದು ಈಗಿನ ರಾಜಕಾರಣಿಗಳ ಸದ್ಯದ ಭರವಸೆ.
ಅದೇ ರೀತಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಯಾವುದೇ ಭ್ರಷ್ಟಾಚಾರ, ಹಗರಣಗಳ ಹಿನ್ನೆಲೆ ಇರಲಿಲ್ಲ. ಜೊತೆಗೆ ಇವರ ಜೊತೆಗೆ ದೇಶದ ಹಲವು ರಾಜ್ಯಗಳಲ್ಲಿ ಸ್ನೇಹಿತರಿದ್ದರು. ಮುಲಾಯಂ ಸಿಂಗ್ ಯಾದವ್, ಲಲ್ಲೂ ಪ್ರಸಾದ್ ಯಾದವ್, ಸ್ಟಾಲಿನ್ ಎಲ್ಲರೂ ಸಹ ಕಾಂಗ್ರೆಸ್ ಜೊತೆಗೆ ಇದ್ದರು.
ಆದರೂ ಸಹ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಇವರುಗಳು ಹರಿಬಿರಿಯಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಪ್ರಜ್ವಲ್ ಅವರ ಪೆನ್ ಡ್ರೈವ್ ಹಗರಣವನ್ನು ಮುಚ್ಚಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿದ್ದರು.
ಅದರೆ ಬಿಜೆಪಿಯ ವಾಷಿಂಗ್ ಮೆಷಿನ್ ಪ್ರಜ್ವಲ್ ಅವರ ಹಗರಣವನ್ನು ತೊಳೆಯುವ ಬದಲು ಮತ್ತಷ್ಟು ಕೊಳೆ ಮಾಡಿ ಮೈತ್ರಿ ಮಾಡಿಕೊಂಡ ಉದ್ದೇಶವನ್ನೇ ಹಾಳು ಮಾಡಿಟ್ಟಿದೆ. ಬಿಜೆಪಿ ವಾಷಿಂಗ್ ಮೆಷಿನ್ ಹೊಕ್ಕು ಲೈಂಗಿಕ ಹಗರಣದ ಕೊಳೆ ತೊಳೆದುಕೊಂಡು ಬಚಾವಾಗಿ ಬರುವ ಕೊನೆ ಆಸೆಯೂ ಕಮರಿ ಹೋದಂತಾಗಿದೆ.




