Thursday, September 19, 2024

ಪ್ರಾಯೋಗಿಕ ಆವೃತ್ತಿ

ಪೊಲೀಸರು ಗೂಂಡಾಗಳಂತೆ ದೌರ್ಜನ್ಯ ನಡೆಸಿರುವುದು ಪ್ರಜಾಪ್ರ ಭುತ್ವದ ಕಗ್ಗೊಲೆ : ಬೂದುನೂರು ಬೊಮ್ಮಯ್ಯ

ಪ್ರತಿಭಟಿಸುವ, ಚಳವಳಿ ಮಾಡುವ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿರುತ್ತದೆ. ಒಂದು ವೇಳೆ ಚಳವಳಿ ಸಮಾಜಕ್ಕೆ ತೊಂದರೆ ಉಂಟು ಮಾಡುವಂತಿದ್ದರೆ ಅಂತಹದನ್ನು ತಡೆಯಲು  ಕಾನೂನು ಕ್ರಮಗಳನ್ನು ಅನುಸರಿಸಬೇಕು. ಅದು ಬಿಟ್ಟು ಪೊಲೀಸರು ಗೂಂಡಾಗಳಂತೆ ವರ್ತಿಸಿ ರೈತರ ಮೇಲೆ ದೌರ್ಜನ್ಯ ನಡೆಸಿರುವುದು ಪ್ರಜಾಪ್ರ ಭುತ್ವದ ಕಗ್ಗೊಲೆಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ಮಂಡ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಬೂದನೂರು ಬೊಮ್ಮಯ್ಯ ಖಂಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಒತ್ತಾಯಿಸಿ ಕಳೆದ 52 ದಿನಗಳಿಂದಲೂ ಶಾಂತಿಯುತವಾಗಿ ಚಳವಳಿ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ನಡೆಸಿ, ಶಾಮಿಯಾನ, ಕುರ್ಚಿಗಳು, ಪಾತ್ರೆ ಇನ್ನಿತರ ವಸ್ತುಗಳನ್ನು ಕೊಂಡೊಯ್ದದ್ದು ಪೊಲೀಸರ ಅಮಾನುಷ ಕ್ರಮವಾಗಿದೆ, ಇದು ಖಂಡನೀಯ ಎಂದರು.

ಬೇಡಿಕೆ ಈಡೇರಿಸಬೇಕಾದ ಸರ್ಕಾರ ರೈತರ ಮೇಲೆ ದೌರ್ಜನ್ಯ ನಡೆಸಿ, ಚಳವಳಿಯ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರ ನಡೆಸುತ್ತಿದೆ. ಚಳವಳಿ ನಡೆಸುತ್ತಿರುವುದರಿಂದ ಯಾರಿಗೂ ತೊಂದರೆಯಾಗಿಲ್ಲ, ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲೇ ಇದ್ದರೂ ಒಮ್ಮೆಯೂ ಸಂಚಾರಕ್ಕೆ ತೊಂದರೆಯಾಗಿಲ್ಲ. ಆದರೆ ಅನ್ನದಾತರ ಮೇಲೆ ಏಕಾಏಕಿ ಪೊಲೀಸರು ದಾಳಿ ನಡೆಸಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದರು.

ಅಮಿತಾ ಶಾ ಭೇಟಿಗೆ ಎರಡು ದಿನ ಮುನ್ನವೇ ಹೋರಾಟ ನಿರತ ರೈತರ ಮೇಲೆ ಬಿಜೆಪಿ ಸರಕಾರ, ದಮನಕಾರಿ ನೀತಿ ಮೂಲಕ ಹೋರಾಟವನ್ನು ಹತ್ತಿಕ್ಕುತ್ತಿದೆ. ಈ ಬಿಜೆಪಿ ಸರಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲವಾಗಿದೆ. ಪ್ರತಿಭಟನೆ ನಿರತ ರೈತರಿಗೆ ಬರೀ ಭರವಸೆಯನ್ನು ನೀಡಿದೆಯೇ ಹೊರತು, ಸ್ಪಂದಿಸಿಲ್ಲ. ಬಿಜೆಪಿಯ ಅಮಿತ್ ಶಾ ಬರುತ್ತಿದ್ದಾರೆ ಎನ್ನುವ ಉದ್ದೇಶದಿಂದಲೇ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ಪ್ರತಿಮೆಗಳ ಅವಶ್ಯಕತೆ ಏನಿದೆ 

ರಾಜ್ಯ ಸರ್ಕಾರ ರಾಮನಗರದ ರಾಮದೇವರ ಬೆಟ್ಟದಲ್ಲಿ ದೇವಾಲಯ, ಪ್ರತಿಮೆ ಸ್ಥಾಪನೆ ಮಾಡುವುದಾಗಿ ಹೇಳುತ್ತಿದೆ, ಆದರೆ ಇವುಗಳ ಅಗತ್ಯವೇನಿದೆ. ಈ ಸರ್ಕಾರಕ್ಕೆ ಮಹನೀಯರ ಪ್ರತಿಮೆಗಳನ್ನು ನಿರ್ಮಿಸುವುದೇ ಸಾಧನೆಗಳಾಗಿವೆ ಎಂದು ಕಿಡಿಕಾರಿದ ಅವರು, ಪ್ರತಿಮೆಗಳನ್ನು ಸ್ಥಾಪಿಸುವುದನ್ನು ಬಿಟ್ಟು‌, ರೈತರು ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಲಿ ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದಿನೇಶ್, ಪುಟ್ಟಸ್ವಾಮಿ ಹಾಗೂ ಬಿ.ಸಿ.ಸಿದ್ದು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!