ತಮ್ಮ ಕೊನೆಯುಸಿರಿರುವವರೆಗೂ ಜನಪರ ಹೋರಾಟಗಳಲ್ಲಿ ಭಾಗಿಯಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರ ಪ್ರಥಮ ಪುಣ್ಯಸ್ಮರಣೆಯನ್ನು ಮಂಡ್ಯ ನಗರ ಶ್ರಮಿಕ ಒಕ್ಕೂಟದ ಸದಸ್ಯರು ಆಚರಿಸುವ ಮೂಲಕ ಸ್ಮರಿಸಿದರು.
ಮಂಡ್ಯ ನಗರದ ಹೊಸಹಳ್ಳಿ ಗುರುಮಠದಲ್ಲಿ ಎಚ್.ಎಸ್. ದೊರೆಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ಹಾರ ಹಾಕಿ ಮೇಣದಬತ್ತಿ ಬೆಳಗುವ ಮೂಲಕ ಪ್ರಥಮ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮಾಡಿದರು. ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡ ಶಂಕರ್ ಮಾತನಾಡಿ, ಎಚ್.ಎಸ್.ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದರು.
ಸ್ವಾತಂತ್ರ್ಯ ಬಂದ ನಂತರವೂ ತಮ್ಮ ಕೊನೆಯ ಉಸಿರಿರುವವರೆಗೂ ಬಡವರು, ಕಾರ್ಮಿಕರು, ಶ್ರಮಿಕ ಜನರು ಸೇರಿದಂತೆ ಇತರೆ ಜನರ ಹಕ್ಕುಗಳಿಗಾಗಿ ಹೋರಾಟ ಮಾಡಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಶ್ರಮಿಕ ಜನರ ಹೋರಾಟದಲ್ಲಿ ಭಾಗಿಯಾಗಿ ವಸತಿ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು ಎಂದು ತಿಳಿಸಿದರು.
ಅವರ ಜನಪರ ಹೋರಾಟದ ಬದುಕು ನಮ್ಮೆಲ್ಲರಿಗೂ ಮಾದರಿಯಾಗಿದೆ.ಅವರ ಜನಪರ ಹೋರಾಟ,ಆದರ್ಶದ ಜೀವನ ಎಂದೆಂದಿಗೂ ಜೀವಂತವಾಗಿರಲಿದೆ ಎಂದರು. ಈ ಸಂದರ್ಭದಲ್ಲಿ ಬಡಾವಣೆಯ ಜನರು ಎಚ್.ಎಸ್.ದೊರೆಸ್ವಾಮಿ ಅವರಿಗೆ ಗೌರವ ಸಲ್ಲಿಸಿದರು.