Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿವೇಕಾನಂದ ಬಡಾವಣೆ ನಿವಾಸಿಗಳಿಂದ ಮತದಾನ ಬಹಿಷ್ಕಾರ

ಮಂಡ್ಯನಗರದ ವಿವೇಕಾನಂದನಗರ (ಕೆರೆಯಂಗಳ) ನಿವಾಸಿಗಳು ಮೂಲಸೌಕರ್ಯಗಳಿಲ್ಲದೇ ಕಳೆದ 2 ದಶಕಗಳಿಂದ ಬೇಸತ್ತಿದ್ದು, ಈ ಬಾರಿಗೆ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ವಿವೇಕಾನಂದನಗರ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ.ರಾಜು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಮೂಲ ಸೌಕರ್ಯಗಳನ್ನು ಜಿಲ್ಲಾಡಳಿತ ಹಾಗೂ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ಕಲ್ಪಿಸದ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಮತದಾನ ಬಹಿಷ್ಕರಿಸಿದ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಚುನಾವಣೆ ನಂತರ ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಇನ್ನೂ ಈಡೇರದ ಕಾರಣ ಮತದಾನ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

1998ರಲ್ಲಿ ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ವಿವೇಕಾನಂದ ನಗರ ಬಡಾವಣೆಯನ್ನು ನಿರ್ಮಿಸಿ,2800 ನಿವೇಶನಗಳನ್ನು ನೀಡಿದೆ. ಸದರಿ ಬಡಾವಣೆಯಲ್ಲಿ 600 ಮನೆಗಳಿದ್ದು, ಮೂಲ ಸೌಕರ್ಯಗಳಾದ ಕುಡಿಯುವ ನೀರು, ಯುಜಿಡಿ, ಚರಂಡಿ, ವಿದ್ಯುತ್ ದೀಪ, ರಸ್ತೆ ಹಾಗೂ ರಸ್ತೆಗಳಿಗೆ ನಾಮಫಲಕ ಹಾಕಿಲ್ಲ. ಈ ಸಂಬಂಧ ಮುಡಾ ಆಯುಕ್ತರು, ಅಧ್ಯಕ್ಷರು ಹಾಗೂ ಜನಪ್ರತಿನಿಧಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಆಯುಕ್ತರು ಮತ್ತು ಅಧ್ಯಕ್ಷರು ಯಾವುದೇ ಮೂಲ ಸೌಲಭ್ಯ ಕಲ್ಪಿಸದೆ, ಬಡಾವಣೆಯ ನಿವಾಸಿಗಳಿಗೆ ಮೋಸವೆಸಗಿದ್ದಾರೆ. ಇದರಿಂದಾಗಿ ನಿವಾಸಿಗಳು ತುಂಬಾ ತೊಂದರೆ ಮತ್ತು ನೋವನ್ನು ಅನುಭವಿಸುತ್ತಿದ್ದು, ಇದರಿಂದಾಗಿ ಮತದಾನ ಬಹಿಷ್ಕಾರ ತೆಗೆದುಕೊಂಡಿರುವುದಾಗಿ ತಿಳಿಸಿದರು.

ಸುಮತಿ ಆತ್ಮಾನಂದ ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ಅವರಿಗೆ ಮನವಿ ನೀಡಿದ್ದರೂ ಇದುವರೆಗೂ ನಮ್ಮ ಕಷ್ಟಗಳು ನಿವಾರಣೆಯಾಗಿಲ್ಲ. ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿನಾಯಿಗಳು ಎಲ್ಲೇ ಸತ್ತರೂ ನಮ್ಮ ಬಡಾವಣೆಗೆ ತಂದು ಬಿಸಾಡುತ್ತಿರುವುದರಿಂದ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ ಎಂದು ಆಪಾದಿಸಿದರು.

ಬಡಾವಣೆ ನಿರ್ಮಾಣವಾಗಿ 22 ವರ್ಷಗಳು ಕಳೆದಿದ್ದರೂ ನಿವೇಶನದಾರರಿಗೆ ಮನೆ ಕಟ್ಟಲು ಲೈಸೆನ್ಸ್ ಸಹ ನೀಡುತ್ತಿಲ್ಲ. ಕೇವಲ ಆಶ್ವಾಸನೆ ಕೊಡುತ್ತಾರೆಯೇ ಹೊರತು, ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದರು.

ಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನಿವೃತ್ತ ತಹಸಿಲ್ದಾರ್ ರಾಮಪ್ಪ, ರಾಮು, ಶಿವರಾಮು, ಶಿವಕುಮಾರ್, ಪುಟ್ಟೇಗೌಡ, ಕೆ.ಸಿ. ಚಂದ್ರಶೇಖರ್ ಹಾಜಿರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ