Wednesday, May 15, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಏ.14ಕ್ಕೆ ಡಾ.ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ಸಂಘದ ಸಹಯೋಗದಲ್ಲಿ 11ನೇ ವರ್ಷದ ಡಾ. ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭವು ಏ.14ರಂದು ಸಂಜೆ 5.30ಕ್ಕೆ ಮಂಡ್ಯನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಪ್ರಸಿದ್ಧ ವಕೀಲ ಸಿ.ಎಚ್. ಹನುಮಂತರಾಯ ಅವರಿಗೆ `ಡಾ. ಹಾಮಾನ ಭಾಷಾ ವಿಜ್ಞಾನ ಹಿರಿಯ ಪ್ರಶಸ್ತಿ’ಯನ್ನು, ಮೈಸೂರಿನ ಭಾಷಾ ವಿಜ್ಞಾನಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಸೋಮಶೇಖರಗೌಡ ಅವರಿಗೆ ಹಾಗೂ `ಡಾ. ಹಾಮಾನಾ ಭಾಷಾ ವಿಜ್ಞಾನ ಯುವ ಪ್ರಶಸ್ತಿ’ಯನ್ನು ಹಂಪಿ ಕನ್ನಡ ವಿವಿ ಕನ್ನಡ ಭಾಷಾಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಪಿ.ಮಹಾದೇವಯ್ಯ ಅವರಿಗೆ ಪ್ರದಾನ ಮಾಡಲಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶಗೌಡ ವಹಿಸಲಿದ್ದು, ಪ್ರಾಧ್ಯಾಪಕ ಡಾ. ಪಿ.ಬೆಟ್ಟೇಗೌಡ ಅಭಿನಂದನಾ ನುಡಿಗಳನ್ನಾಡಲಿದ್ದು, ಕೆನರಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಡಾ. ಎಸ್.ಟಿ. ರಾಮಚಂದ್ರ, ಉದ್ಯಮಿ ವಿವೇಕ ಹೆಗ್ಗಡೆ ಅವರು ಭಾಗವಹಿಸಲಿದ್ದಾರೆ ಎಂದರು.

ಡಾ. ಸೋಮಶೇಖರಗೌಡ ಪರಿಚಯ
ಕೆ.ಆರ್.ಪೇಟೆಯ ಅಂಬಿಗರಹಳ್ಳಿಯ ಸೋಮೇಗೌಡ-ಸಣ್ಣತಾಯಮ್ಮ ಅವರ ಪುತ್ರರಾಗಿರುವ ಡಾ. ಸೋಮಶೇಖರಗೌಡ ಅವರ ಕೃಷಿ ಕುಟುಂಬ. ಭಾಷಾ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪಿಎಚ್‌ಡಿ ಪೂರೈಸಿದ್ದಾರೆ. ಅಧ್ಯಯನ ಮತ್ತು ಅಧ್ಯಾಪನದಿಂದ ಮಾನ್ಯತೆ ಪಡೆದಿದ್ದು, `ಭಾಷಾ ವಿಜ್ಞಾನ ವಿವಕ್ಷೆ’, `ನಾವಾಡುವ ಭಾಷೆ’, `ಭಾಷಾ ರಚನೆ ಬಳಕೆ’ ಎಂಬ ಹಲವಾರು ಮೌಲಿಕ ಕೃತಿಗಳನ್ನು ನೀಡಿದ್ದಾರೆ. `ಭಾವಷ್ರೋತ’ ಎಂಬ ಕವನ ಸಂಕಲನದ ಮೂಲಕ ಕವಿಯಾಗಿಯೂ ಗುರುತಿಸಿಕೊಂಡಿದ್ದು, `ಕುವೆಂಪು ಅನುಸಂಧಾನ’ ಎಂಬ ವಿಮರ್ಶಾ ಕೃತಿಯನ್ನು ಹೊರತಂದಿದ್ದಾರೆ. ಡಾ. ಹಾಮಾನಾ ಗರಡಿಯಲ್ಲಿ ಪಳಗಿದ ಶಿಷ್ಯರಲ್ಲಿ ಇವರೂ ಒಬ್ಬರು.

ಪ್ರೊ. ಪಿ. ಮಹಾದೇವಯ್ಯ ಪರಿಚಯ
ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಆಲಕೆರೆ ಅಗ್ರಹಾರ ಗ್ರಾಮದ ಪುಟ್ಟಮಾದಯ್ಯ-ಮಹಾದೇವಮ್ಮ ಅವರ ಪುತ್ರರಾಗಿರುವ ಪ್ರೊ. ಪಿ. ಮಹಾದೇವಯ್ಯ ಅವರು, ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮೈಸೂರು ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ, ಭಾಷೆಯಲ್ಲಿ ಆಧ್ಯಾತ್ಮವಿದೆ, ಸಂಸ್ಕೃತಿಯಿದೆ, ಪ್ರಭುತ್ವದ ಮಜಲುಗಳಿವೆ. ಈ ಎಲ್ಲವನ್ನೂ ಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಿ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಧ್ಯಯನ, ಆಧ್ಯಾಪನ, ಬರವಣಿಗೆಯ ಜೊತೆಗೆ ವಿವಿಧ ಆಡಳಿತಾತ್ಮಕ ಸೇವೆಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಹಂಪಿ ಕನ್ನಡ ವಿವಿ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಹಣಕಾಸು ಅಧಿಕಾರಿಯಾಗಿ, ಕುಲಸಚಿವರಾಗಿ, ಅಧ್ಯಯನಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಗೋಷ್ಠಿಯಲ್ಲಿ ಶಂಕರೇಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!