Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಾ.2-3 ; ‘ಬೂದನೂರು ಉತ್ಸವ’ ಆಚರಣೆ – ರವಿಕುಮಾರ್

ಚೋಳರ ಕಾಲದ ವಾಸ್ತುಶಿಲ್ಪದ ಆಧಾರದ ಮೇಲೆ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಕಾಶೀ ವಿಶ್ವನಾಥ ಮತ್ತು ಆನಂತ ಪದ್ಮನಾಭ ದೇಗುಲಗಳ ಪರಂಪರೆಯನ್ನು ಬಿಂಬಿಸಲು ಇದೇ ಮಾರ್ಚ್ 2 ಮತ್ತು 3ರಂದು ಮಂಡ್ಯ ತಾಲ್ಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ‘ಬೂದನೂರು ಉತ್ಸವ’ ಆಚರಣೆಗೆ ಸಕಲ ಸಿದ್ದತೆ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಪಿ.ರವಿಕುಮಾರ್ ಗೌಡ ತಿಳಿಸಿದರು.

ಮಂಡ್ಯ ತಾಲ್ಲೂಕಿನ ಬೂದನೂರಿನ ಕಾಶೀ ವಿಶ್ವನಾಥ ದೇಗುಲ ಆವರಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರ ಧಾರ್ಮಿಕತೆಯ ಸೊಗಡನ್ನು ರಾಜ್ಯ ಹಾಗೂ ರಾಷ್ಟ್ರ ವ್ಯಾಪಿ ವಿಸ್ತರಿಸಲು ಪ್ರಥಮವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

ಗ್ರಾಮದಲ್ಲಿ ನಿರ್ಮಾಣವಾಗಿರುವ ಎರಡು ಪುರಾತನ ದೇಗುಲಗಳ ನಿರ್ಮಾಣದ ಹಿಂದೆ ಐತಿಹಾಸಿಕ ಅಥವಾ ಪೌರಾಣಿಕ ಹಿನ್ನೆಲೆ ಇರುವ ಕುರಿತು ಸಂಶೋಧಕರಿಂದ ಸಂಶೋಧನೆ ನಡೆಸಿ ವಾಸ್ತವತೆಯನ್ನು ಅರಿಯಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕೇರಳ ರಾಜ್ಯ ತಿರುವಂತಪುರದ ಅನಂತ ಪದ್ಮನಾಭ ದೇಗುಲ ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಮಂಡ್ಯ ಜಿಲ್ಲೆಯ ಬೂದನೂರಿನಲ್ಲಿ ಮಾತ್ರ ಸದರಿ ದೇವಾಲಯ ನಿರ್ಮಾಣವಾಗಿದ್ದು, ಅನಂತ ಪದ್ಮನಾಭ ದೇಗುಲದಲ್ಲಿ ಇಂದಿಗೂ ಹತ್ತಾರು ಅಡಿ ಉದ್ದದ ನಾಗರಹಾವು ವಾಸ್ತವ್ಯವಿರುವುದು ದೇಗುಲದ ಧಾರ್ಮಿಕತೆಯನ್ನು ಬಿಂಬಿಸುತ್ತದೆ ಎಂದರು.

ಗ್ರಾಮದ ಎರಡು ದೇಗುಲಗಳ ವಾಸ್ತು ಶಿಲ್ಪದ ಶ್ರೀಮಂತಿಕೆ ಹಾಗೂ ಗ್ರಾಮದಲ್ಲಿರುವ ಕೆರೆಗೆ ಐತಿಹಾಸಿಕ ಹಿನ್ನೆಲೆ ಇದ್ದು ಇವುಗಳ ಪ್ರಸಿದ್ದತೆಯನ್ನು ಪಸರಿಸಲು ಬೂದನೂರು ಉತ್ಸವ ಸಹಕಾರಿಯಾಗಲಿದೆ ಎಂದರು.

ಉತ್ಸವಕ್ಕೆ 65 ಲಕ್ಷ ರೂ.ಅನುದಾನ

ಮಂಡ್ಯ ವಿಧಾನಸಭಾ ಕ್ಷೇತ್ರದ ಹೊಸ ಬೂದನೂರು ಗ್ರಾಮದಲ್ಲಿ ಪ್ರಥಮವಾಗಿ ಆಯೋಜಿಸುತ್ತಿರುವ ಬೂದನೂರು ಉತ್ಸವಕ್ಕೆ ಸಚಿವ ಶಿವರಾಜ ತಂಗಡಗಿ ಪ್ರತಿನಿಧಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 50 ಲಕ್ಷ ರೂ.ಗಳ ಅನುದಾನ ಹಾಗೂ ಹಿರಿಯ ಸಚಿವ ಹೆಚ್.ಕೆ.ಪಾಟೀಲ್ ಪ್ರತಿನಿಧಿಸುವ ಪ್ರವಾಸೋದ್ಯಮ ಇಲಾಖೆಯಿಂದ 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಮಂಡ್ಯ ಜಿಲ್ಲಾಡಳಿತ ಹಾಗೂ ನನ್ನ ಸ್ವಂತ ಖರ್ಚಿನಿಂದ ಇತರೆ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗುವುದೆಂದು ತಿಳಿಸಿದರು.

ಎರಡು ದಿನಗಳ ಕಾಲ ನಡೆಯುವ ಉತ್ಸವಕ್ಕೆ 10 ರಿಂದ 15 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 8 ಸಾವಿರ ಮಂದಿಗೆ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದ ವೇಳೆ ಐತಿಹಾಸಿಕ ದೇಗುಲಗಳನ್ನು ಸಂದರ್ಶಿಸುವ ಅವಕಾಶವಿದ್ದು, ಹೊಸ ಬೂದನೂರು ಗ್ರಾಮದ ಎರಡು ದೇಗುಲಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದೆಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಬಸರಾಳು ಗ್ರಾಮದಲ್ಲಿ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಹಾಗೂ ಕೆರಗೋಡು ಗ್ರಾಮದಲ್ಲಿರುವ ಪಂಚಲಿಂಗೇಶ್ವರ ದೇಗುಲಗಳು ಐತಿಹಾಸಿಕ ಹಿನ್ನೆಲೆ ಹೊಂದಿದ್ದು ಸದರಿ ದೇಗುಲಗಳ ಪರಂಪರೆಯನ್ನು ಬಿಂಬಿಸಲು ಯೋಜನೆ ರೂಪಿಸಲಾಗುವುದೆಂದರು.

ಸಚಿವ ಚಲುವರಾಯಸ್ವಾಮಿ ಚಾಲನೆ

ಎರಡು ದಿನಗಳ ಕಾಲ ಆಯೋಜನೆಗೊಳ್ಳುವ ಬೂದನೂರು ಉತ್ಸವಕ್ಕೆ ಮಾ.2ರಂದು ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಲಿದ್ದು, ವಿವಿಧ ಕಲಾ ಪ್ರಕಾರಗಳ ಜಾನಪದ  ಮೆರವಣಿಗೆಯನ್ನು ಗ್ರಾಮದ ಹೆಬ್ಬಾಗಿಲಿನಿಂದ ದೇಗುಲದವರೆಗೆ ಆಯೋಜಿಸಲಾಗಿದೆ ಎಂದು ವಿವರಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ವಾರಣಾಸಿಯ ಕಾಶೀ ವಿಶ್ವನಾಥ ದೇಗುಲದ 16 ಜನ ಅರ್ಚಕರ ನೇತೃತ್ವದಲ್ಲಿ ಗಂಗಾರತಿ ನಡೆಯಲಿದ್ದು, ಜಿಲ್ಲೆ ಹಾಗೂ ರಾಜ್ಯದಲ್ಲಿ ಆವರಿಸಿರುವ ಬರಗಾಲದ ಬೇಗುದಿಗೆ ಅಂತ್ಯವಾಡಿ ವರುಣನ ಕೃಪೆ ಕೇಳಲು ಪ್ರಾರ್ಥಿಸುವುದಾಗಿ ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಾಬು, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ ಹಾಗೂ ಹೆಚ್.ಟಿ.ಮಂಜು ಸೇರಿದಂತೆ ವಿಧಾನ ಪರಿಷತ್ ಸದಸ್ಯರು ಹಾಗೂ ಸ್ಥಳೀಯ ಗ್ರಾ.ಪಂ. ಚುನಾಯಿತ ಗಣ್ಯರು ಸಾಕ್ಷಿಯಾಗಲಿದ್ದಾರೆಂದರು.

ಮಾ.3ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ಥಳೀಯ ಕಲಾವಿದರಿಂದ 1 ಗಂಟೆಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ತರುವಾಯ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪಾಲ್ಗೊಳ್ಳಲಿದ್ದಾರೆಂದರು.

ಸಾಧು ಕೋಕಿಲ ಕಾರ್ಯಕ್ರಮ

ಮಾ.2ರಂದು ನಾಡಿನ ಶ್ರೇಷ್ಠ ಹಾಸ್ಯ ಕಲಾವಿದ ಸಾಧು ಕೋಕಿಲ ತಂಡದಿಂದ ರಸ ಮಂಜರಿ ಕಾರ್ಯಕ್ರಮ ಹಾಗೂ ಸಾಮೂಹಿಕ ನೃತ್ಯ ಪ್ರದರ್ಶನಗಳು ನಡೆಯಲಿದ್ದು, ಕಿರುತೆರೆ ಹಾಗೂ ಹಿರಿತೆರೆಯ ಅನೇಕ ನಟ ನಟಿಯರು ಭಾಗಿಯಾಗಲಿದ್ದಾರೆಂದರು.

ಮಾ.3ರಂದು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಅನೇಕ ಕಿರುತೆರೆ ನಟ ನಟಿಯರು ಸಾಕ್ಷಿಯಾಗಲಿದ್ದಾರೆ. ಕಾರ್ಯಕ್ರಮ ಆಯೋಜನೆಗೆ 40 X 100 ಅಡಿ ಅಳತೆಯ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದ್ದು, ವಾಹನ ನಿಲುಗಡೆ ಜೊತೆಗೆ 40 ಮಳಿಗೆಗಳಲ್ಲಿ ಆಹಾರ ಮೇಳ ಆಯೋಜಿಸಿ, ಪ್ರೇಕ್ಷಕರ ಮನ ತಣಿಸಲಾಗುವುದೆಂದರು.

ಗೋಷ್ಠಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಮಾನಸ, ಉಪಾಧ್ಯಕ್ಷ ಜಯಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ, ಮುಖಂಡರಾದ ಬಿ.ಟಿ.ಚಂದ್ರಶೇಖರ್, ಜಯರಾಮು, ಶೇಖರ್, ಶಿವಕುಮಾರ್ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!