Saturday, September 21, 2024

ಪ್ರಾಯೋಗಿಕ ಆವೃತ್ತಿ

”ಜನಧರ್ಮವಾಗಬೇಕಿದ್ದ ಬುದ್ಧ ಹಲವು ದೇಶಗಳಲ್ಲಿ ಅಧಿಕಾರದ ಸೆರೆಯಲ್ಲಿ ಸಿಕ್ಕಿ ಸ್ಥಾವರವಾಗಿದ್ದಾನೆ”

✍️ ಶಿವಸುಂದರ್ 

ಆತ್ಮೀಯರೇ ,
ಇಂದು ಬುದ್ಧ ಪೂರ್ಣಿಮೆ.

ವಿಪರ್ಯಾಸ ವೆಂದರೆ ಅರಮನೆ ತೊರೆದು ಜನ ಮಾರ್ಗತೋರಿದ ಗುರುವನ್ನು….

ಇಂದಿನ ದಿನಗಳಲ್ಲಿ ಅರಸಾಗ ಬಯಸುವವರು ಅಥವಾ ಅರಮನೆಯ ನೆರಳಲ್ಲಿ ಇರಬಯಸುವವರೇ ಹೆಚ್ಚೆಚ್ಚು ಆರಾಧಿಸುತ್ತಿದ್ದಾರೆ…!

ಜನಧರ್ಮವಾಗಬೇಕಿದ್ದ ಬುದ್ಧ ಹಲವು ದೇಶಗಳಲ್ಲಿ ಅಧಿಕಾರದ ಸೆರೆಯಲ್ಲಿ ಸಿಕ್ಕಿ ಸ್ಥಾವರವಾಗಿದ್ದಾನೆ.

ಇನ್ನು ಕೆಲವು ಕಡೆ ಚೆ ಗುವಾರನಂತೆ ಬಾಲ್ಕನಿಗಳ ಶೋ ಕೇಸಿನ ಮೆರುಗನ್ನು ಹೆಚ್ಚಿಸಿದ್ದಾನೆ.

ಇವೆಲ್ಲದರ ನಡುವೆ…

ನಿರ್ವಾಣಗೊಳ್ಳಲು ಸಿದ್ದವಿಲ್ಲದೆ ನಿಜ ಮನುಷ್ಯರಾಗುವುದು ಹೇಗೆಂಬ….

ನಿಜ ಅನ್ವೇಷಣೆಯಲ್ಲಿರುವ ಹಲವರು …

ತಥಾಗತನಿಂದ ಸಿದ್ಧ ಅರ್ಥವನ್ನು ನಿರೀಕ್ಷಿಸುವ ವ್ಯರ್ಥ ಪ್ರಯತ್ನ ದಲ್ಲಿದ್ದಾರೆ….

ಜಂಗಮವಾಗದ ಜನಧರ್ಮ ಅರಮನೆ ಸೇರಿ ಸ್ಥಾವರವಾದ ನಂತರದಲ್ಲಿ ಉಳಿಯುವುದು ಮೂಲದ ಕಳೇಬರ ಅಥವಾ ಭಾಷೆ ಬದಲಿಸಿದ ರಾಜಮರ್ಮ ಮಾತ್ರ…

ಇದೆ ಇತಿಹಾಸ..

ಅಧಿಕಾರ ಮತ್ತು ಸ್ವಾರ್ಥ ಬುದ್ಧನನ್ನು ಕೊಂದದ್ದು ಹೀಗೆ…

ಬಸವನನ್ನು ಕೊಂದದ್ದೂ ಹೀಗೆ ..

ಅಂಬೇಡ್ಕರ್ ಹಾಗು ಮಾರ್ಕ್ಸ್ ನನ್ನ ಕೊಲ್ಲುತ್ತಿರುವುದು ಹೀಗೆಯೇ …

ಈ ಹಿನ್ನೆಲೆಯಲ್ಲಿ ಈ ಬುದ್ಧ ಪೂರ್ಣಿಮೆಯ ದಿನ..

ಬೌದ್ಧಧರ್ಮವನ್ನು ರಾಜಧರ್ಮವಾಗಿ ಘೋಷಿಸಿರುವ ಶ್ರೀಲಂಕಾ…

ಸ್ವಾರ್ಥ-ಜನಾಂಗೀಯ ವೈಷ್ಯಮ್ಯ- ಯುದ್ಧ- ಭ್ರಷ್ಟ ಅಧಿಕಾರ-ಕುಟುಂಬ ರಾಜಕಾರಣ ಗಳಿಂದ ತತ್ತರಿಸುತ್ತಿರುವ ಶ್ರೀಲಂಕಾ…

ನಿಜ ಬುದ್ಧನನ್ನು ಕಾಣುವ ಪ್ರಯತ್ನ ಮಾಡಬಲ್ಲದೇ?

ಬೌದ್ಧ ಪ್ರಭುತ್ವ ಮತ್ತು ಅಲ್ಲಿನ ಬೌದ್ಧ ಭಜರಂಗಿಗಳು (ಭಾರತದ ಭಜರಂಗ ದಳ= ಶ್ರಿಲಂಕಾದ ಬೌದ್ಧ ಬಲ ಸೇನಾ ) ಆಚರಿಸುವ ಬುದ್ಧ ಪೂರ್ಣಿಮೆಯನ್ನು ಅವರಿಂದಲೇ ಸತತ ಹಿಂಸಾಚಾರಕ್ಕೆ ಗುರಿಯಾಗಿರುವ ಅಲ್ಲಿನ ಈಳಂ ತಮಿಳರು ಮತ್ತು ಮುಸ್ಲಿಮರು ಹೇಗೆ ಭಾವಿಸಬಹುದು ?

ಬೌದ್ಧ ಬರ್ಮಾದಲ್ಲಿನ ರೋಹಿಂಗ್ಯಾ ಮುಸ್ಲಿಮರು… ??

ಎಲ್ಟಿಟಿಇ ಮೇಲಿನ ಯುದ್ಧದ ಹೆಸರಿನಲ್ಲಿ ಶ್ರೀಲಂಕಾದ ಆಗಿನ ಅಧ್ಯಕ್ಷ ರಾಜಪಕ್ಸೆ ಮತ್ತು ಆಗಿನ ಸೇನಾಧಿಕಾರಿ ಗಾಟ್ ಬಾಯ್ ಬೌದ್ಧ ಆಡಳಿತದ ಹೆಸರಿನಲ್ಲಿ…

ಬುದ್ಧ ಭಿಕ್ಕುಗಳ ಸಕ್ರಿಯ ಬೆಂಬಲದೊಂದಿಗೆ…

ಈಳಂ ಹೋರಾಟಗಾರರ ಮೇಲೆ ಹಾಗು ಜಾಪ್ನಾ ತಮಿಳರ ಮೇಲೆ ನಡೆಸಿದ ಅಮಾನುಷ, ಬೀಭತ್ಸ ಹತ್ಯಾಕಾಂಡಗಳು..

…. ಮತವಾಗುವ ಧರ್ಮದ ಬಗ್ಗೆ ಹಾಗೂ ನಿಜನಿರ್ವಾಣದ ಬಗ್ಗೆ ಹಲವು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಈ ಹಿನ್ನೆಲೆಯಲ್ಲಿ ಕೆಳಗಿನ ಕವನವನ್ನು 2009ರಲ್ಲಿ ಪ್ರಭಾಕರನ್ ಹತ್ಯೆಯಾದ ನಂತರ ಶ್ರೀಲಂಕಾ ಪ್ರಭುತ್ವ ನಡೆಸಿದ ಹತ್ಯಾಕಾಂಡ , ಅತ್ಯಾಚಾರಗಳ ಹಿನ್ನೆಲೆಯಲ್ಲಿ ಬರೆದಿದ್ದೆ.

ಈ ಸಂದರ್ಭದಲ್ಲಿ ಅದನ್ನು ತಮ್ಮೊಡನೆ ಮತ್ತೊಮ್ಮೆ ಹಂಚಿಕೊಳ್ಳಬೇಕೆನ್ನಿಸಿತು…

ಬುದ್ಧ ರಾಜಪಕ್ಸ ವಹಿಸಿದ್ದೇಕೆ?

ಬುದ್ಧ ಸುಮ್ಮನಿದ್ದನೇಕೆ?

ಬುದ್ಧಪುತ್ರರು ಭೂಮಿಪುತ್ರರನ್ನು
ಹರಿದು ಮುಕ್ಕುವಾಗ
ಬುದ್ದ ಸುಮ್ಮನಿದ್ದನೇಕೆ?

ಸಂಘದೊಳಗೆ ಸಿಂಹಗಳು ಬಿಡಾರ ಹೂಡಿದ್ದೇಕೆ?

ಭಿಕ್ಕುವಿನ ಕಮಂಡಲದಲ್ಲೂ ರಕ್ತ ಹೆಪ್ಪುಗಟ್ಟಿದ್ದೇಕೆ?

ದಮ್ಮದೇಶದಲ್ಲೂ ಯುದ್ಧ ಕೊನೆಗೊಳ್ಳದೇಕೆ?

ಬುದ್ಧ ಮಹಾಮೌನಿ.
ಮೌನಕ್ಕೆ ನೂರೆಂಟು ಅರ್ಥ!

ಆಸೆಯೇ ದುಃಖಕ್ಕೆ ಮೂಲ. ಯಾರಿಗದರ ಅನುಕೂಲ?

ಬದ್ದರಾಗದ ಭೂಮಿಪುತ್ರರು

ಬದುಕುವ ಆಸೆಯನ್ನೇ ತೊರೆಯಬೇಕೆಂದರೇ ತಥಾಗತರು?!

ಅರಸೊತ್ತಿಗೆ ಮದಮತ್ಸರಗಳ ಸಿಂಹಾಸನ..

ಪ್ರತಿಮನವೂ ಅರಮನೆ ತೊರೆಯದೇ..

ದೊರೆತೀತೆ ಪರಿನಿರ್ವಾಣ?

ಆದರೂ ರಾಜಪಕ್ಷಿಗಳು ಸಂಘಮಿತ್ರರಾದರೇಕೆ?

ದೇವನಿಲ್ಲದ ದಮ್ಮ
ದಾನವನಾಗದ ಮಾನವ
ಐಹಿಕವೊಲ್ಲದ ಭಿಕ್ಕು
ಮನುಕುಲದ ಬೆಳಕು!

ನಿಜ ನಿರ್ವಾಣಕ್ಕೆ ’ರಾಜ’ಮಾರ್ಗವಿಲ್ಲ

ಕೊಲ್ಲಂಬುವನ್ನು ಹಿಡಿದವರಲ್ಲಿ ಬುದ್ಧನಿಲ್ಲ!

ಮಹಾಮನೆ ಅರಮನೆಗೆ ನೆರೆಯಾಗಿದೆ..

ತ್ಯಾಗ ಭೋಗಕ್ಕೆ ನೆರವಾಗಿದೆ

ಬುದ್ಧ ರಾಜಪಕ್ಸ ವಹಿಸಿದೆ

ಅಂಗುಲೀಮಾಲನ ಸೇನೆ
ಸಾವಿಲ್ಲದ ಮನೆಗಳ..

ಸಾಸಿವೆಯನ್ನು ಧ್ವಂಸ ಮಾಡುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!