ಪ್ರತ್ಯೇಕ ರಾಜ್ಯ ರಚನೆ ಆಗಬೇಕೆಂದು ಪದೇ ಪದೇ ಹೇಳಿಕೆ ನೀಡುತ್ತಿರುವ ಸಚಿವ ಉಮೇಶ್ ಕತ್ತಿ ಅವರ ರಾಜೀನಾಮೆ ಪಡೆದು ಸಚಿವ ಸಂಪುಟದಿಂದ ಸರ್ಕಾರ ಹೊರಹಾಕಬೇಕೆಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹತ್ತಾರು ಬಾರಿ ಪ್ರತ್ಯೇಕ ರಾಜ್ಯದ ಹೇಳಿಕೆ ಇರುವ ಸಚಿವ ಉಮೇಶ್ ಕತ್ತಿ ರಾಜಿನಾಮೆ ಪಡೆಯಲು ಏಕೆ ಮುಂದಾಗುತ್ತಿಲ್ಲ. ಈ ಬಗ್ಗೆ ಬಿಜೆಪಿ ಪಕ್ಷ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಬೇಕು.
ಕಾಂಗ್ರೆಸ್, ಜನತಾದಳ ಪಕ್ಷಗಳು ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ,ದೆಹಲಿಯಲ್ಲಿ ಪ್ರತಿಭಟನೆ ಮಾಡಬೇಕು ಎಂದರು.
ಉಮೇಶ್ ಕತ್ತಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂದೆಲ್ಲಾ ಹೇಳಿ ಜನರನ್ನ ಎತ್ತಿಕಟ್ಟಿ ರಾಜ್ಯ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜನರ ಮಧ್ಯೆ ಬೆಂಕಿ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಉಮೇಶ್ ಕತ್ತಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ನಿಂದು ಒತ್ತಾಯಿಸಿದರು.
ಕನ್ನಡಿಗರು ಒಗ್ಗಟ್ಟಾಗಿದ್ದಾರೆ. ಕಾವೇರಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜನರೂ ಕೂಡ ಹೋರಾಟ ಮಾಡಿದ್ದಾರೆ. ಅದೇ ರೀತಿ ಮಹದಾಯಿ ವಿಚಾರದಲ್ಲಿ ದಕ್ಷಿಣ ಕರ್ನಾಟಕದ ಜನರು ಧ್ವನಿಯೆತ್ತಿದ್ದಾರೆ. ಕನ್ನಡಿಗರ ಮಧ್ಯೆ ಬೆಂಕಿಹಚ್ಚಿ ಒಡೆಯುವ ಹುನ್ನಾರ ಮಾಡುತ್ತಿರುವ ಉಮೇಶ್ ಕತ್ತಿಯವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ವೆಬ್ಸೈಟಿನಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು,ಇದಕ್ಕೆ ಕೃಷಿ ಇಲಾಖೆ ಅಧಿಕಾರಿಗಳ ಮತ್ತು ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಇದರಿಂದ ಕನ್ನಡ ರೈತರುಗಳಿಗೆ ನಷ್ಟವಾಗುತ್ತಿದೆ.ಈ ಬಗ್ಗೆ ರಾಜ್ಯದ 25 ಸಂಸದರು ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಂಚಾಲಕ ಎಸ್. ಶಿವಕುಮಾರ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಮಂಡ್ಯ ಜಿಲ್ಲೆ ಅಧ್ಯಕ್ಷ ಭಗವಾನ್, ಮುಖಂಡ ಬೆಂಜಮಿನ್ ಥಾಮಸ್ ಉಪಸ್ಥಿತರಿದ್ದರು.