ವೈಯಕ್ತಿಕ ಸ್ವಾರ್ಥ ಮತ್ತು ರಾಜಕೀಯ ಪ್ರತೀಕಾರದಿಂದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಶಾಸಕ ರವೀಂದ್ರ ಶ್ರೀಕಂಠಯ್ಯ ದುರುದ್ದೇಶದಿಂದ ಅರಕೆರೆ ಸರ್ಕಾರಿ ಶಾಲೆಯ ಕಾಂಪೌಂಡ್ ವಿಚಾರದಲ್ಲಿ ಅನಗತ್ಯವಾಗಿ ಮಾಜಿ ಶಾಸಕ ರಮೇಶ್ ಬಾಬು ಹೆಸರನ್ನು ಎಳೆದು ತರುತ್ತಿದ್ದಾರೆ.
2010ರಲ್ಲಿ ಅರಕೆರೆ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 15ರಿಂದ 20 ಅಡಿ ಜಾಗವನ್ನು ರಸ್ತೆಗೆ ಬಿಡಬೇಕು ಎಂದು ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಆದರೆ ರವೀಂದ್ರಶ್ರೀಕಂಠಯ್ಯ ರಾಜಕೀಯ ಸ್ವಾರ್ಥಕ್ಕಾಗಿ ಈ ವಿಚಾರವನ್ನು ಮುಂದೆ ತಂದು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದು, ಇದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
1950ರಲ್ಲಿ 3.08 ಗುಂಟೆ ಜಮೀನನ್ನು ಹೊನ್ನಪ್ಪ ಟ್ರಸ್ಟ್ ಸರ್ಕಾರಿ ಶಾಲೆಗೆ ದಾನವಾಗಿ ನೀಡಿತು. ಆದರೆ ಇದುವರೆಗೂ ಕೂಡ ಇದು ಹೊನ್ನಪ್ಪ ಟ್ರಸ್ಟ್ ಸುಪರ್ದಿಯಲ್ಲಿದೆ. ಸರ್ಕಾರಿ ಶಾಲೆಗೆ ಮೂರು ಎಕರೆ ಮಾತ್ರ ದಾನವಾಗಿ ನೀಡಿದ್ದು ಉಳಿಕೆ 08ಗುಂಟೆ ಜಮೀನು ಸೇರಿಲ್ಲ. ಆರ್ ಟಿಸಿ ಕೂಡ ಹೊನ್ನಪ್ಪ ಟ್ರಸ್ಟ್ ಹೆಸರಿನಲ್ಲಿ ಇದೆ.ಮೊದಲು ಮೂರು ಎಕರೆ ಜಾಗವನ್ನು ಶಾಸಕರು ಶಾಲೆ ಹೆಸರಿಗೆ ಖಾತೆ ಮಾಡಿಸುವ ಕಾರ್ಯಕ್ಕೆ ಮುಂದಾಗಲಿ ಎಂದರು.
ಅಲ್ಲದೆ ಈ ಸ್ಥಳಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ನ್ಯಾಯಾಲಯ ಕೂಡ 5-4-2022ರಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ.ನ್ಯಾಯಾಲಯದ ಆದೇಶವನ್ನು ಅನುಷ್ಠಾನ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬದ್ಧಗಿರುತ್ತಾರೆ ಹೊರತು, ಶಾಸಕರ ಆದೇಶವನ್ನು ಪಾಲಿಸಲು ಅಲ್ಲ ಎಂಬುದನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರವೀಂದ್ರ ಶ್ರೀ ಕಂಠಯ್ಯ ಧರಣಿಗೆ ಮುಂದಾದರೆ ನಾವು ಕೂಡ ತಾಲೂಕು ಕಚೇರಿ ಮುಂದೆ ಧರಣಿ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಮೇಶ್ ಬಾಬು ಅವರು ತಮ್ಮ ಗ್ಯಾಸ್ ಗೋದಾಮಿಗೆ ರಸ್ತೆ ಜಾಗವನ್ನು ಕಳಿಸಿದ್ದಾರೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಪಂಚಾಯಿತಿ ಮಾಡಿರುವ ಸರ್ವಾನುಮತದ ನಿರ್ಣಯವನ್ನು ಗೌರವಿಸುವುದು ಶಾಸಕರ ಕರ್ತವ್ಯ. ಅದು ಬಿಟ್ಟು ವೈಯಕ್ತಿಕ ರಾಜಕೀಯ ಪ್ರತೇಕಾರಕ್ಕಾಗಿ ಸಲ್ಲದ ಆರೋಪಗಳನ್ನು ಮಾಡುವುದು ಶಾಸಕ ರವೀಂದ್ರ ಶ್ರೀಕಂಠಯ್ಯನವರಿಗೆ ಶೋಭೆ ತರುವುದಿಲ್ಲ ಎಂದರು.
ಕಾಂಗ್ರೆಸ್ ಮುಖಂಡರಾದ ಪುಟ್ಟೇಗೌಡ, ರಮೇಶ್ ಮಿತ್ರ, ಸಿ.ಎಂ.ದ್ಯಾವಪ್ಪ, ವಿಜಯಕುಮಾರ್ ಕೊತ್ತತ್ತಿ ರಾಜು, ದೀಪಕ್ ಉಪಸ್ಥಿತರಿದ್ದರು.
ಇದನ್ನು ಓದಿ : ಮೂವರು ಸಚಿವರ ಮಾತಿಗೂ ಬೆಲೆ ಕೊಡದ ಡಿಸಿ