ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದು, 2023 ರಲ್ಲೂ ಬಿಜೆಪಿಯದ್ದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದ ಸರಕಾರಿ ಪದವಿಪೂವ೯ ಮಹಿಳಾ ಕಾಲೇಜು ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಬಿಜೆಪಿ ಸೇರ್ಪಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿವೆ. ಆದರೆ 2023 ರಲ್ಲಿ ಜನರು ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಬಿಜೆಪಿ ಸರಕಾರ ರೈತರಿಗೆ ಹೆಚ್ಚು ಒತ್ತು ನೀಡಿದೆ. ರೈತರಿಗೆ ನೈತಿಕವಾಗಿ ಧೈರ್ಯ ತುಂಬಲಾಗಿದೆ. ಕೋವಿಡ್ ಲಸಿಕೆ ತಯಾರಿಸಿ ಎಲ್ಲಾರಿಗೂ ಉಚಿತವಾಗಿ ಲಸಿಕೆ ನೀಡಲಾಗಿದೆ. ಎಲ್ಲಾ ತಾಲ್ಲೂಕಿನಲ್ಲೂ ಆಮ್ಲಜನಕ ಘಟಕ ನಿಮಾ೯ಣ ಮಾಡಲಾಗಿದೆ.
ಜಲಜೀವನ್ ಮಿಷನ್ ನಿಂದ ಪ್ರತಿ ಮನೆಗಳಿಗೆ ನೀರು ಕೊಡಲಾಗುತ್ತಿದೆ ಎಂದರು.
ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನು ಅಪಾಯದಿಂದ ಪಾರು ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ.ಅವರ ನಾಯಕತ್ವದಲ್ಲಿ 150 ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಿಸುವುದರ ಮೂಲಕ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದರು. ಬಿಜೆಪಿ ಕಾಯ೯ಕತ೯ರು ಸಕಾ೯ರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಬೇಕೆಂದು ಕರೆ ನೀಡಿದರು.
ಕ್ರೀಡೆ ಮತ್ತು ರೇಷ್ಮೆ ಸಚಿವ ನಾರಾಯಣ್ ಗೌಡ ಮಾತನಾಡಿ, ಜಿಲ್ಲೆಯಲ್ಲಿ 4 ರಿಂದ 5 ಕ್ಷೇತ್ರದಲ್ಲಿ ಗೆಲ್ಲಲು ಸಭೆ ನಡೆಸಲಾಗುತ್ತಿದೆ. ಬಿಜೆಪಿ ಪಕ್ಷಕ್ಕೆ ಭಾರತದಲ್ಲಿ ಶಕ್ತಿ ತುಂಬುವ ಕೆಲಸ ಮೋದಿ ಮಾಡಿದ್ದಾರೆ. ಭಾರತದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಗೆಡ್ದೆ ಕಿತ್ತು ಹೋಗುವ ಭಯ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೊಡುಗೆ ಶೂನ್ಯವಾಗಿದೆ. ಬಡತನವನ್ನು ದೂರ ಮಾಡುತ್ತೇನೆಂದು ಹೇಳುವ ನಾಯಕರು ಜನರ ಕೈಗೆ ಸಿಗುವುದಿಲ್ಲ. ಕುಟುಂಬವೇ ಕ್ಯಾಬಿನೆಟ್ ಆಗಬೇಕೆಂದುಕೊಂಡಿದ್ದಾರೆ, ಬಡತನ ನಿರ್ಮೂಲನೆ ಮಾಡುತ್ತೇವೆಂದು ಹೇಳುತ್ತಾರೆ. ಮಂಡ್ಯ ಜಿಲ್ಲೆಗೆ ಏನೂ ಕೊಡುಗೆ ನೀಡದವರು ಕಣ್ಣೀರು ಸುರಿಸಲು ಮುಂದಾಗುತ್ತಾರೆ ಎಂದು ಜೆಡಿಎಸ್ ವರಿಷ್ಠರ ವಿರುದ್ಧ ಹರಿಹಾಯ್ದರು. ಉದ್ಯಮಿ ಸೋಮಶೇಖರ್, ರಾಜು ಸೇರಿದಂತೆ ಇತರರು ಬಿಜೆಪಿಗೆ ಸೇಪ೯ಡೆಗೊಂಡರು.
ಇದೇ ಸಂದರ್ಭದಲ್ಲಿನ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್,ಮಾಜಿ ಸಚಿವ ಬಿ. ಸೋಮಶೇಖರ್, ರವಿಕುಮಾರ್, ಜಿಲ್ಲಾಧ್ಯಕ್ಷ ವಿಜಯಕುಮಾರ್, ತಾಲ್ಲೂಕು ಮಂಡಲ ಅಧ್ಯಕ್ಷ ಕೃಷ್ಣ, ಬಿಜೆಪಿ ಮುಖಂಡರಾದ ಡಾ.ಸಿದ್ದರಾಮಯ್ಯ, ಬಸವರಾಜು, ನಾಗಣ್ಣಗೌಡ, ಕಾಂತರಾಜು, ಮಧು ಗಂಗಾಧರ್, ಪುಟ್ಟಸಿದ್ದೇಗೌಡ, ನಿತ್ಯಾ ನಂದ, ಕೆ.ಸಿ ನಾಗೇಗೌಡ ಸೇರಿದಂತೆ ಇತರರಿದ್ದರು.