ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಗ್ರಾಮದಲ್ಲಿ ಸರ್ಕಾರಿ ಆಸ್ತಿಯನ್ನು ರಕ್ಷಿಸಿ ಎಂದು ಸರ್ಕಾರದ ಮೂವರು ಸಚಿವರು ಹೇಳಿದರೂ, ಅವರ ಮಾತಿಗೆ ಬೆಲೆ ಕೊಡದೆ ಮಂಡ್ಯ ಜಿಲ್ಲಾಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಆಸ್ತಿಯನ್ನು ಕಾಪಾಡಬೇಕಾದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಮಾಜಿ ಶಾಸಕನ ಜೊತೆ ಕೈಜೋಡಿಸಿ ಆತನ ಹಿತ ಕಾಯಲು ನಿಂತಿದ್ದಾರೆ.
ಸಚಿವರಾದ ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ನಾಗೇಶ್ ರವರು ಜಿಲ್ಲಾಧಿಕಾರಿಗಳಿಗೆ ಮಾತನಾಡಿದರೂ, ಅವರ ಮಾತು ಕೇಳದೆ ಮಾಜಿ ಶಾಸಕರ ಹಿತ ಕಾಯುವುದೇ ತಮ್ಮ ಕರ್ತವ್ಯ ಎಂದು ಕೊಂಡಿದ್ದಾರೆ. ಜನರ ಕೆಲಸ ಮಾಡದ ಇವರು ವರ್ಗಾವಣೆ ಮಾಡಿಸಿಕೊಂಡು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ರಮೇಶ್‌ಬಾಬು, ಬಂಡಿಸಿದ್ದೇಗೌಡ ಅವರ ಪತ್ನಿ ಒಡೆತನದ ಗ್ಯಾಸ್ ಗೋಡೌನ್‌ಗೆ ಶಾಲಾ ಆವರಣದಲ್ಲಿ ಅನಧಿಕೃತ ರಸ್ತೆ ಮಾಡಿಕೊಂಡಿದ್ದಾರೆ. ಮೂಲ ನಕ್ಷೆಯಲ್ಲಿ ಯಾವುದೇ ರಸ್ತೆ ಇಲ್ಲ. ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರೂ ರಮೇಶ್ ಬಾಬು ಶಾಸಕರಾಗಿದ್ದ ಅವಧಿಯಲ್ಲಿ ರಸ್ತೆಯನ್ನು ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.
ಅರಕೆರೆ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಿಂದ 12ನೇ ತರಗತಿವರೆಗೆ ಸುಮಾರು 900 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಒಂದು ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಿಸಲು ಸರ್ಕಾರದಿಂದ 19 ಲಕ್ಷ ರೂ ಮಂಜೂರಾಗಿತ್ತು. ಆದರೆ ಜಿಲ್ಲಾಧಿಕಾರಿ ಅಶ್ವತಿ ಅವರ ಬೇಜವಾಬ್ದಾರಿಯಿಂದ ವಾಪಾಸ್ ಹೋಗಿದೆ ಎಂದು ಕಿಡಿಕಾರಿದರು.
ಎರಡು ಬಾರಿ ಶಾಸಕನಾದವನು ಸರ್ಕಾರದ ಆಸ್ತಿಯನ್ನು ತನ್ನ ಆಸ್ತಿ ಎಂಬಂತೆ ಆಡುತ್ತಿರುವುದನ್ನು ನೋಡಿದರೆ ಕ್ಷೇತ್ರದ ಜನಪ್ರತಿನಿಧಿಯಾಗಲು ಈತ ಅರ್ಹನೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ತಿ ಉಳಿಸುವ ಸಂಬಂಧವಾಗಿ ಜಿಲ್ಲಾಧಿಕಾರಿಗಳ ಬಳಿ ಹತ್ತಕ್ಕೂ ಹೆಚ್ಚು ಬಾರಿ ಪತ್ರ ವ್ಯವಹಾರ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ಸಹಿಸಿಕೊಂಡು ಕೂರುವ ಜಾಯಮಾನ ನನ್ನದಲ್ಲ. ರೈತಾಪಿ ವರ್ಗದ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗಳ ಮೇಲ್ಚಾವಣಿ ಕುಸಿಯುತ್ತಿದೆ. ಮುಂದೇನಾದರೂ ಅನಾಹುತವಾಗಿ ಮಕ್ಕಳಿಗೆ ತೊಂದರೆಯಾದರೆ ಇದಕ್ಕೆ ಕಾರಣವಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.
ಶಿಕ್ಷಣ ಸಚಿವರು, ಕಾನೂನು ಸಚಿವರು, ಗೃಹ ಸಚಿವರು ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರೂ, ಜಿಲ್ಲಾಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಕಾಲ ದೂಡುತ್ತಿದ್ದಾರೆ. ಕಾಂಪೌಂಡ್ ನಿರ್ಮಾಣ ಸಂಬಂಧ ಇಷ್ಟೆಲ್ಲ ನಡೆಯುತ್ತಿದ್ದರೂ, ಜಿಲ್ಲಾಧಿಕಾರಿ ಸೌಜನ್ಯಕ್ಕಾದರೂ ಒಮ್ಮೆಯೂ ಭೇಟಿ ಮಾಡಿ ಜಾಗ ಪರಿಶೀಲನೆ ನಡೆಸಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಾಂಪೌಂಡ್ ನಿರ್ಮಾಣ ಮಾಡಲು ರಕ್ಷಣೆ ಒದಗಿಸಿ ಎಂದರೆ ಯಾವ ಅನುದಾನದಲ್ಲಿ ಆಗುತ್ತಿದೆ ಎಂದು ಕೇಳುತ್ತಾರೆ. ಇವರ ಅಕ್ರಮ ಎಲ್ಲವೂ ಗೊತ್ತಿದ್ದು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ ಎಂದು ಕಿಡಿಕಾರಿದರು.
ಮಾಜಿ ಶಾಸಕರ ಒಡೆತನದ ಗ್ಯಾಸ್ ಅಂಗಡಿಗೆ ರಸ್ತೆ ಮುಖ್ಯವೋ, ಶಾಲಾ ಮಕ್ಕಳ ಹಿತದೃಷ್ಟಿ ಮುಖ್ಯವೋ ಎಂದು ಪ್ರಶ್ನಿಸಿದ ಅವರು, ಸರ್ಕಾರಿ ಜಾಗವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಈ ಕೆಲಸ ಮಾಡದಿದ್ದ ಮೇಲೆ, ನೀವು ಜಿಲ್ಲಾಧಿಕಾರಿಗಳಾಗಿ ಏನು ಪ್ರಯೋಜನ. ನಿಮಗೆ ಕೆಲಸ ಮಾಡಲು ಅಗದಿದ್ದರೆ ರಾಜೀನಾಮೆ ನೀಡಿ ಇಲ್ಲವಾದರೆ, ವರ್ಗಾವಣೆ ಪಡೆದು ನಿರ್ಗಮಿಸಿ ಎಂದರು.
ಇದನ್ನೂ ಓದಿ : ಶಾಸಕರಿಂದ ಆಧಾರರಹಿತ ಆರೋಪ