Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿ.ಎಂ. ಇಬ್ರಾಹಿಂ ವಿರುದ್ಧ ಉನ್ನತ ಶಿಕ್ಷಣ ಸಚಿವ ಅಶ್ವಥ್‌ನಾರಾಯಣ್ ಕಿಡಿ

ವರದಿ : ಪ್ರಭು ವಿ. ಎಸ್.

ರಾಜ್ಯ ಬಿಜೆಪಿ ನಾಯಕರಿಗೆ ಗಂಡಸ್ತನವಿಲ್ಲ ಹಾಗಾಗಿ ಪದೇ ಪದೆ ಕೇಂದ್ರ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆಂದು ಹೇಳಿಕೆ ನೀಡಿರುವ ಸಿ.ಎಂ. ಇಬ್ರಾಹಿಂ ವಿರುದ್ಧ ಉನ್ನತ ಶಿಕ್ಷಣ ಸಚಿವ ಅಶ್ವಥ್‌ನಾರಾಯಣ್ ಕಿಡಿಕಾರಿದರು.

ಮದ್ದೂರು ಪಟ್ಟಣದಲ್ಲಿ ಸುದ್ಧಿಗಾರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ಶಾ ಕಂಡರೆ ಕರ್ನಾಟಕದವರಿಗೆ ಅಪಾರ ಅಭಿಮಾನ ಆರ್ಟಿಕಲ್ 370ನ್ನು ವಜಾ ಮಾಡಿ ಹೇಗೆ ಕೆಲಸ ಮಾಡಬೇಕೆಂದು ತೋರಿಸಿಕೊಟ್ಟಿದ್ದು ಪಾಪ ಸಿ.ಎಂ. ಇಬ್ರಾಹಿಂಗೆ ಇದೆಲ್ಲಾ ಎಲ್ಲಿ ಅರ್ಥವಾಗುತ್ತೆ. ಇದನ್ನೆಲ್ಲಾ ನೀವು ಸಿರೀಯಸ್‌ಆಗಿ ತೆಗೆದುಕೊಳ್ಳಬೇಡಿ ಅವರ ಸ್ಟೇಟ್‌ಮೆಂಟ್ ಎಂಟರ್‌ಟೈನ್‌ಮೆಂಟ್  ಇದ್ದಂಗೆ ಎಂದು ಕಟುವಾಗಿ ಟೀಕಿಸಿದರು.

ಟಿಪ್ಪು ವಿರೋಧಿ ಹೇಳಿಕೆ ಕೊಟ್ರೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಸಿ.ಎಂ. ಇಬ್ರಾಹಿಂ ಅವರು ಅಂತ ಸ್ಟೇಟ್‌ಮೆಂಟ್  ಕೊಡಬೇಕು ಎಂದು ಹೇಳಲು ಅವರು ಯಾರು ಹೇಳಿ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಹಳ್ಳ ಹಿಡಿಸಬೇಕಿದ್ರೆ ಸಿಎಂ ಇಬ್ರಾಹಿಂ ಅವರ ಹೇಳಿಕೆಗಳೇ ಸಾಕಿದ್ದು, ಇಂತಹ ಹೇಳಿಕೆಗಳನ್ನು ಮುಂದುವರಿಸಿದ್ರೆ ರಾಜ್ಯದ ಜನ ಅವರನ್ನ ಅವರ ಪಕ್ಷವನ್ನ ಇಲ್ದಂಗೆ ಕಳಿಸಿಬಿಡ್ತಾರೆ. ಇನ್ನೊಮ್ಮೆ ಟಿಪ್ಪು ಬಗ್ಗೆ ಹೇಳಿಕೆ ಕೊಟ್ರೆ ಅಥವಾ ಕೊಡೊ ಧೈರ್ಯ ಮಾಡಿದ್ರೆ ಅವರ ವಿಳಾಸವೇ ಕರ್ನಾಟಕ ರಾಜ್ಯದಲ್ಲಿ ನಾಪತ್ತೆಯಾಗುವುದೆಂಬ ನುಡಿಯೊಟ್ಟಿಗೆ ನಿಮಗೆ ಟಿಪ್ಪು ಬೇಕಾ? ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಕಾ? ಜನರ ತೀರ್ಪು ಇಷ್ಟರಲ್ಲೇ ಹೊರಬೀಳಲಿದೆ ಕಾದು ನೋಡಿ ಎಂದರು.

ದೇವಸ್ಥಾನಗಳನ್ನು ಮಸೀದಿಗಳನ್ನಾಗಿಸಿ ಮತಾಂಧ ಕೆಲಸದೊಟ್ಟಿಗೆ ನರಹಂತಕ ಕಾರ್ಯ ಸಾಧಿಸಿ ಆಶ್ರಯ ನೀಡಿದ್ದ ಮೈಸೂರು ಸಂಸ್ಥಾನದ ರಾಜರನ್ನೇ ಗೃಹಬಂಧನಂದಲ್ಲಿರಿಸಿದ ಟಿಪ್ಪುವಿನ ಸಾಧನೆಗಿಂತ ಮೈಸೂರು ಅರಸರ ಬಣ್ಣನೆ ಸಾಧುವಲ್ಲವೇ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಣ್ಣಿರ ವಿಧಾಯದ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆಂಬ ಆರೋಪವನ್ನು ತಳ್ಳಿ ಹಾಕಿದ ಅವರು ಬಿಜೆಪಿ ಧುರೀಣ, ಹಿರಿಯ ಮುತ್ಸದ್ಧಿ ಬಿಎಸ್‌ವೈ ಹುಟ್ಟು ಹಬ್ಬಕ್ಕೆ ಖುದ್ದು ಪ್ರಧಾನಿ ಅವರೇ ರಾಜ್ಯಕ್ಕೆ ಆಗಮಿಸಿದ್ದು ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರಿಗೆ ಬಿಜೆಪಿ ಪಕ್ಷದ ಬಗ್ಗೆ ಅಪಾರವಾದ ಕಾಳಜಿ, ಒಲವಿದ್ದು ಅವರು ಕಣ್ಣೀರಕ್ಕಿದ್ದು ಸಂತೋಷದಿಂದ ಇಂದಿಗೂ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ದುಡಿಯುತ್ತಿರುವ ಬಿಎಸ್‌ವೈ ಅವರಿಗೆ ರಾಜ್ಯದ ಜನರು ಮತಷ್ಟು ಶಕ್ತಿ ತುಂಬಲಿದ್ದಾರೆಂದರು.

ಡಿ.ಕೆ. ಶಿವಕುಮಾರ್ ಅವರಿಗೆ ಅವರ ಪಕ್ಷದ ಕುರಿತು ಕಾಳಜಿ ಇದ್ದರೆ ಸಾಕು, ಅವರಿಗೆ ಅವರದೇ ಪಕ್ಷದಲ್ಲಿ ಸ್ಥಾನಮಾನವಿಲ್ಲ ಕಷ್ಟದಲ್ಲಿ ಉಸಿರಾಡುತ್ತಿದ್ದಾರೆ. ಛೇರೆಳೆದು ಕುಳಿತಿದ್ದು ಕೋವಿಡ್ ಸಮಯದಲ್ಲಿ. ಕಷ್ಟಪಟ್ಟು ಜನ ಹೊದ್ದಾಡುತ್ತಿದ್ರು ಲಸಿಕೆ ತೆಗೆದುಕೊಳ್ಳೋದು ಬೇಡಾ ಅಂತ ಕಾಂಗ್ರೆಸ್ಸಿಗರು ಹೇಳಿದ್ರು. ಇವರು ಭ್ರಷ್ಟಾಚಾರಿಗಳು ಮತ್ತು ಸ್ವಾರ್ಥಿಗಳೆಂದು ಹರಿಹಾಯ್ದರು.

ತೃಷ್ಟೀಕರಣದ ಪಕ್ಷ ಕಾಂಗ್ರೆಸ್ , ಜಾತಿ, ಜಾತಿ ನಡುವೆ ಹೊಡೆದಾಟ ತಂದಿದ್ದು ಕಾಂಗ್ರೆಸ್. ರಾಜಕೀಯದಿಂದ ನಿವೃತ್ತಿಯಾಗುತ್ತೆವೆ ಅಂದ್ರು ನಿವೃತ್ತಿ ಆದ್ರ? ಇವರಿಗೆ ರಿಟೈಡ್‌ಮೆಂಟ್ ಇಲ್ವಾ? ತಳಮಟ್ಟದಿಂದ ಆಕಾಶದ ವರೆವಿಗೂ ಭ್ರಷ್ಟಾಚಾರವನ್ನೇ ಮೆರೆದ ಕಾಂಗ್ರೆಸ್ ಪಕ್ಷ ಸುಜ್ರೇವಾಲ ಅವರಂತಹ ಕೇಂದ್ರ ಮಟ್ಟದ ನಾಯಕರ ಹೇಳಿಕೆಗಳು ಸಾಧುವಲ್ಲವೆಂದರು.

ನಾನು ಹಿಂದು ಹಿಂದುತ್ವದ ವಿರೋಧಿ ಎಂಬ ಹೇಳಿಕೆ ಕೊಡ್ತಾರಲ್ಲಾ ಇವರಿಗೇನಾದ್ರು ಬುದ್ಧಿ ಇದಿಯಾ ಭ್ರಷ್ಟಾಚಾರ ನಿರ್ಮೂಲನೆಗೆ ಇವರ ಕೊಡುಗೆ ಏನೆಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಬಾವುಕವಾಗಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ನಾವೆಲ್ಲಾ ರಾಜಕೀಯಕ್ಕೆ ಬಂದಿರುವುದು ಜನರಿಗೋಸ್ಕರ ಜನರು ತೀರ್ಮಾನ ಮಾಡಿ ನಿಶ್ಚಯ ಮಾಡುತ್ತಾರೆ, ಅಧಿಕಾರ ಕೊಟ್ಟಂತಹ ಸಂದರ್ಭದಲ್ಲಿ ಏನಾಯಿತು, ಏನಾಗಿದೆ ಎಂಬುದು ಜನರಿಗೆ ಗೊತ್ತಿದ್ದು ಭಾವನಾತ್ಮಕವಾಗಿ ಹೇಳಿಕೆ ಕೊಟ್ಟಿದ್ದಾರೆ ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆ ಇಲ್ಲವೆಂದರು.

ಬಿಜೆಪಿ ಸೇರ್ಪಡೆ :
ಮದ್ದೂರು ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಹಾಗೂ ತಾ.ಪಂ. ಮಾಜಿ ಅಧ್ಯಕ್ಷೆ ಸವಿತರಾಜಣ್ಣ ಅವರ ಪತಿ, ಜೆಡಿಎಸ್ ಮುಖಂಡ ಮೆಣಸಗೆರೆ ರಾಜಣ್ಣ ಕೊಪ್ಪ ಹೊಬಳಿ ಬೆಸಗರಹಳ್ಳಿ ಅಡ್ಡರಸ್ತೆ ನಿವಾಸಿ ಜೆಡಿಎಸ್ ಮುಖಂಡ ಬಾಲಕೃಷ್ಣ ಮತ್ತಿತರರು ಸಚಿವ ಅಶ್ವಥ್‌ನಾರಾಯಣ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಮನ್‌ಮುಲ್ ನಿರ್ದೇಶಕ ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ, ಮುಖಂಡರಾದ ಮನುಕುಮಾರ್, ಹನುಮಂತು, ಚಿಕ್ಕಮರಿಯಪ್ಪ, ಅಭಿಷೇಕ್, ಮಧು ಮಾಧವಿಕುಮಾರ್, ರಾಜಣ್ಣ, ಮಹೇಶ್, ಪ್ರಭು ಇತರರಿದ್ದರು.

ಮದ್ದೂರು ಪಟ್ಟಣದ ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್‌ನಾರಾಯಣ್ ಅವರನ್ನು ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!