Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಸತ್ಯ : ಸಿ.ಎಸ್.ಪುಟ್ಟರಾಜು

ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಸತ್ಯ. ನಿಮ್ಮ ಮನೆಯ ಮಗ ಸಿ.ಎಸ್. ಪುಟ್ಟರಾಜು ಅವರು ಆ ಸರ್ಕಾರದಲ್ಲಿ ಇರಬೇಕು ಈ ನಿಟ್ಟಿನಲ್ಲಿ ಅತಿಹೆಚ್ಚಿನ ಪ್ರಚಂಡ ಬಹುಮತದಿಂದ ಗೆಲ್ಲಲು ದುದ್ದ ಹೋಬಳಿ ಸಾಕ್ಷಿ ಆಗಬೇಕು ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ಅಭಿಪ್ರಾಯಪಟ್ಟರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿಯ ಬೇವುಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ದುದ್ದ ಹೋಬಳಿಯೊಂದಿಗೆ ನನಗೆ ವಿಶೇಷವಾದ ನಂಟಿದ್ದು ಹೋಬಳಿಯ ಜನತೆಯ ಋಣ ನನ್ನ ಮೇಲಿದೆ. ಈಗಾಗಲೇ ಈ ಭಾಗದ 54 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದಿರುವ 20ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಬೇಕಾಗಿದೆ. ಆ ಕೆಲಸ ನಿರಂತರವಾಗಿ ಆಗಬೇಕಾದರೆ ನಿಮ್ಮ ಮನೆ ಮಗ ಪುಟ್ಟರಾಜು ಮತ್ತೊಮ್ಮೆ ಗೆಲ್ಲಬೇಕಾಗಿದೆ. ದುದ್ದ ಹೋಬಳಿಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯುತ್ತಮ ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ ಎಂದರು.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಆರು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಯಿತು.ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಕೆಲಸವನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಒಂದೊಂದು ಹೋಬಳಿಗೆ ಮೂರು ಸಬ್ ಸ್ಟೇಷನ್ಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಎದುರಿಸಿದರೆ ಈ ಪುಟ್ಟರಾಜು ಸಹಿಸಲು ಸಾಧ್ಯವಿಲ್ಲ. ಮನುಷ್ಯನಿಗೆ ಯಾವುದು ಶಾಶ್ವತ ಅಲ್ಲ ಒಳ್ಳೆಯ ನಡವಳಿಕೆ ಮುಖ್ಯ ಹಾಗಾಗಿ ಯಾವುದೇ ಅಹಿತಕರ ನಡವಳಿಕೆ ಯಾರಿಗೂ ಬೇಡ ಎಂದು ತಿಳಿಸಿದರು.

ಮನಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಮಾತನಾಡಿ, ದುದ್ಧ ಹೋಬಳಿಯ ಹಳ್ಳಿಗಾಡಿಗೆ ಹೇಮಾವತಿ ಹಾಗೂ ಕಾವೇರಿ ನೀರು ತಂದುಕೊಟ್ಟವರು ಸಿ.ಎಸ್. ಪುಟ್ಟರಾಜು ಎಂದು ಹೇಳಿದರು.

ಅಭಿವೃದ್ಧಿಪರ ಚಿಂತನೆ ಮಾಡುವ ಶಾಸಕರು ನಮಗೆ ಬೇಕು.ಎಚ್ಡಿಕೆ ಸರ್ಕಾರದಲ್ಲಿ ಪುಟ್ಟರಾಜು ಅವರನ್ನು ಮತ್ತೊಮ್ಮೆ ಮಂತ್ರಿಯಾಗಿ ನೋಡಲು ಅತಿ ಹೆಚ್ಚು ಮತಗಳನ್ನು ಕೊಟ್ಟು ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.

ಬೇವುಕಲ್ಲು ಗ್ರಾಮದಲ್ಲಿ ಶಾಸಕ ಪುಟ್ಟರಾಜು ಅವರನ್ನು ಮಹಿಳೆಯರು ಪೂರ್ಣಕುಂಭ ಹೊತ್ತು, ಡೊಳ್ಳು ಕುಣಿತ,ವಿವಿಧ ಜಾನಪದ ಕಲಾತಂಡಗಳೊಂದಿಗೆ, ವಿವಿಧ ಹಾರಗಳನ್ನು ಹಾಕಿ,ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುವ ಮೂಲಕ ಅದ್ದೂರಿ ಸ್ವಾಗತ ಕೋರಿದರು.

ಇದೇ ಸಂದರ್ಭದಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಸಿದ್ದಾಂತವನ್ನು ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಾಗಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ವಿವಿಧ ಪಕ್ಷಗಳ ಮುಖಂಡರು ಶಾಸಕ ಪುಟ್ಟರಾಜು ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಪಕ್ಷಕ್ಕೆ ಸೇರ್ಪಡೆಯಾದರು.ಗ್ರಾಮದ ಜನತೆ ಪುಟ್ಟರಾಜು ಅವರ ಚುನಾವಣೆ ಖರ್ಚಿಗಾಗಿ ದೇಣಿಗೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ವಿಶೇಶ್ವರಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಮಲ್ಲೇಶ್, ತಾ.ಪಂ.ಮಾಜಿ ಸದಸ್ಯ ಎಚ್‌.ಬಿ.ಬೆಟ್ಟಸ್ವಾಮಿ, ಮುಖಂಡರಾದ ಶಿವಲಿಂಗಪ್ಪ, ಸಿ ಬಸವರಾಜ್, ಸುರೇಶ್, ಹೊಳಲು ಯೋಗೇಶ್, ಎಂ.ಮಾದೇಗೌಡ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!