Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 4 ದಿನಗಳ ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರಕ್ಕೆ ಚಾಲನೆ 

ಮಂಡ್ಯ ನಗರದ ಹೊರವಲಯದ ಶ್ರೀನಿವಾಸ್‌ಪುರ ಗೇಟ್‌ನ ಆರ್‌.ವಿ.ಎಸ್‌.ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್‌ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಗರ್ಭಾಶಯ ಕ್ಯಾನ್ಸರ್‌ ಹಾಗೂ ಸ್ತನ ಕ್ಯಾನ್ಸರ್‌ಗಳನ್ನು ಪ್ರಾಥಮಿಕ ಹಂತದಲ್ಲಿ ತಪಾಸಣೆ ನಡೆಸುವುದರಿಂದ ಪೂರ್ಣ ಪ್ರಮಾಣದಲ್ಲಿ ರೋಗವನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ನಮ್ಮ ಆರೋಗ್ಯದಲ್ಲಿ ಸಣ್ಣದಾಗಿ ಸಮಸ್ಯೆ ಕಾಣಿಸಿದಾಗ, ಅದು ನಿಧಾನವಾಗಿ ದೇಹದಲ್ಲಿ ಗೋಚರಿಸುತ್ತದೆ ಎಂದರು.

ರಕ್ತದಲ್ಲಿ ಹಿಮೋಗ್ಲೋಬಿನ್‌ ಅಂಶ ಕಡಿಮೆಯಾಗಿ ಸುಸ್ತು, ನಡೆಯಲು ಆಗದಿರುವುದು ಇಂತಹ ಲಕ್ಷಣಗಳು ಕಂಡು ಬರುತ್ತವೆ. ನಮ್ಮ ದೇಹದಲ್ಲಿ ಗಂಟುಗಳು ಬಂದಾಗ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡಲ್ಲಿ ಮುಂದೆ ನಡೆಯುವ ದೊಡ್ಡ ಅಪಾಯವನ್ನು ತಪ್ಪಿಸಿಕೊಳ್ಳಬಹುದು. ಎಲ್ಲರೂ ಜಾಗರೂಕರಾಗಿ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಡಾ.ಮಲೀಸಾ ಮಿಸ್ಟೆಲ್‌ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ನಾಲ್ಕು ದಿನಗಳ ಕಾಲ ನಡೆಯುವ ಉಚಿತ ತಪಾಸಣೆಯನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳಿ, ನಮ್ಮ ಎನ್‌ಜಿಒ ಸಂಸ್ಥೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಉಚಿತ ಶಸ್ತ್ರ ಚಿಕಿತ್ಸೆ ನಡೆಸಿ ಗುಣಪಡಿಸಲಾಗುವುದು ಎಂದರು.

ಆರ್‌.ವಿ.ಎಸ್‌.ಆಸ್ಪತ್ರೆಯ ಅಶೋಕ್ ಜಯರಾಂ ಮಾತನಾಡಿ, ನುರಿತ ವೈದ್ಯರು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮಂಡ್ಯ ಜಿಲ್ಲೆಯ ಜನರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಈ ನಾಲ್ಕು ದಿನಗಳ ಕಾಲ ನಡೆಯುವ ಶಿಬಿರವನ್ನು ಗ್ರಾಮೀಣ ಭಾಗದವರು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಿಮ್ಸ್‌ ಆಸ್ಪತ್ರೆಯ ನಿರ್ದೇಶಕ ನಲ್ಲಿಗೆರೆ ಬಾಲು, ಮನ್‌ಮುಲ್‌ ನಿರ್ದೇಶಕಿ ರೂಪ, ಡಾ.ಸೋಮಶೇಖರ್, ಡಾ.ಪ್ರಭಾವತಿ, ಡಾ.ಮೀರಾ ಪ್ರಸಾದ್, ಡಾ.ಭಗವಾನ್‌, ಡಾ.ಪೌಲಿ ಧಂದ ಭಾಗವಹಿಸಿದ್ದರು.

ಮಂಡ್ಯನಗರದ ಹೊರವಲಯದ ಶ್ರೀನಿವಾಸ್‌ಪುರ ಗೇಟ್‌ನ ಆರ್‌.ವಿ.ಎಸ್‌.ಆಸ್ಪತ್ರೆಯ ಆವರಣದಲ್ಲಿ ಸೆ.14ರವರೆಗೆ ಮಹಿಳೆಯರಿಗಾಗಿ ಗರ್ಭಕೋಶ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!