ಬಿಜೆಪಿ ಜನವಿರೋಧಿ ನೀತಿ ಖಂಡಿಸಿ, ಕೇಂದ್ರ ಸರ್ಕಾರ ದಿನಸಿ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿರುವುದನ್ನು ವಿರೋಧಿಸಿ ಆಗಸ್ಟ್ 1ರಂದು ದೇಶದ ಎಲ್ಲಾ 500 ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 5 ಸಾವಿರಕ್ಕೂ ಹೆಚ್ಚು ಕೂಲಿಕಾರರು ಪ್ರತಿಭಟನೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟುಮಾಧು ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಬಂಡೂರು ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿನಡೆದ ಕೃಷಿಕೂಲಿಕಾರರ 5ನೇ ತಳಗವಾದಿ ವಲಯ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಬಡತನವನ್ನು ನಿರ್ಮೂಲನೆ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಶ್ರೀಮಂತರು ಹಾಗೂ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ.
ಪ್ರತಿದಿನ ಬಳಸುವ ಗ್ಯಾಸ್, ಡೀಸಲ್ ಸೇರಿದಂತೆ ದಿನಬಳಕೆಯ ವಸ್ತುಗಳು ನಿರಂತರವಾಗಿ ಏರಿಕೆ ಮಾಡುವುದರ ಮೂಲಕ ಬಡವರು ಮತ್ತಷ್ಟು ಸಮಸ್ಯೆಗೆ ಸಿಲುಕುವಂತೆ ಮಾಡಿದೆ. ಇದನ್ನು ವಿರೋಧಿಸಿ ರಾಷ್ಟ್ರಾದ್ಯಂತ ಆಗಸ್ಟ್ 1ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡುವಲ್ಲಿ ಕೇಂದ್ರಸರ್ಕಾರ ವಿಫಲವಾಗಿದೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮನ ಹೆಸರಿನಲ್ಲಿ ರಾಜಕೀಯ ಮಾಡುವುದರ ಮೂಲಕ ಕೇವಲ ಅಧಿಕಾರವನ್ನು ಹಿಡಿಯಲಿಕ್ಕಾಗಿ, ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಕೋಮುವಾದವನ್ನು ಧರ್ಮದ ಹೆಸರಿನಲ್ಲಿ ಹರಡಲು ಹೊರಟಿದ್ದಾರೆ. ದೇಶದ ತುಂಬಾ ಇಂತಹ ವಾತಾವರಣವನ್ನು ಸೃಷ್ಠಿಸಿದ್ದಾರೆಂದು ಕಿಡಿಕಾರಿದರು.
ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಕೋಣಿ ಉಡುಪಿ ಕುಂದಾಪುರ ಮಾತನಾಡಿ, ಕೃಷಿಕೂಲಿಕಾರರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳುವ ಹೋರಾಟಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಿ ಒಮ್ಮತದ ನಿರ್ಣಾಯವನ್ನು ಕೈಗೊಳ್ಳುವ ಉದ್ದೇಶದಿಂದ ಮೂರು ವರ್ಷಕೊಮ್ಮೆ ಗ್ರಾಮಘಟಕದಿಂದ ಹಿಡಿದ ರಾಷ್ಟ್ರ ಮಟ್ಟದ
ಕೃಷಿಕೂಲಿಕಾರರ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದರು.
ಉದ್ಯೋಗ ಖಾತ್ರಿ ಉಳಿಸಲು ಕೂಲಿಕಾರರಿಗೆ ಕೆಲಸ ಮತ್ತು 600 ರೂ. ಕೂಲಿ ನೀಡಬೇಕು, ಬಡವರಿಗೆ ಮನೆ, ನಿವೇಶನ, ಹಕ್ಕುಪತ್ರ ನೀಡಬೇಕು, ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್, ರೇಷನ್ ವಿತರಿಸಬೇಕು.ಗ್ರಾಮಕ್ಕೊಂದು ಸ್ಮಶಾನ
ಕಲ್ಪಿಸಿ ಅಭಿವೃದ್ದಿಗೊಳಿಸಬೇಕು ಜಲ ಜೀವನ್ ಕೈಬಿಟ್ಟು, ಪಂಚಾಯತ್ ರಾಜ್ ನಿಯಮದಂತೆ ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಪುಟ್ಟಬಸವಯ್ಯ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ, ತಳಗವಾದಿ ವಲಯ ಅಧ್ಯಕ್ಷ ರಾಮಯ್ಯ ಸೇರಿದಂತೆ ಇತರರು ಇದ್ದರು.