Friday, September 20, 2024

ಪ್ರಾಯೋಗಿಕ ಆವೃತ್ತಿ

ಜಾತಿ ಆಧಾರಿತ ಜನಗಣತಿ ಮಾಡಬಾರದು ಎಂದ ಆರ್.ಎಸ್.ಎಸ್ ನಾಯಕ

ಜಾತಿ ಆಧಾರಿತ ಜನಗಣತಿ ಮಾಡಬಾರದು ಎಂದು ಆರೆಸ್ಸೆಸ್ ಕಾರ್ಯಾಧ್ಯಕ್ಷ ಶ್ರೀಧರ್ ಗಾಡ್ಗೆ ಹೇಳಿದ್ದು, ಜಾತಿ ಗಣತಿಯಿಂದ ಏನು ಸಾಧಿಸಬಹುದು? ಜಾತಿಗಣತಿಯು ರಾಜಕೀಯವಾಗಿ ಕೆಲವರಿಗೆ ಲಾಭವನ್ನು ಮಾಡಬಹುದು. ಒಂದು ನಿರ್ದಿಷ್ಠ ಜಾತಿಯ ಜನಸಂಖ್ಯೆಯ ಬಗ್ಗೆ ಡೇಟಾವನ್ನು ನೀಡಬಹುದು, ಆದರೆ ಇದು ಸಾಮಾಜಿಕವಾಗಿ ಮತ್ತು ರಾಷ್ಟ್ರೀಯ ಏಕತೆಯ ದೃಷ್ಟಿಯಿಂದ ಉತ್ತಮವಲ್ಲ ಎಂದು ಜಾತಿಗಣತಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸಚಿವರು ಮತ್ತು ಶಾಸಕರು ರೇಶಿಂಬಾಗ್‌ನಲ್ಲಿರುವ ಆರೆಸ್ಸೆಸ್ ಸಂಸ್ಥಾಪಕ ಕೆ ಬಿ ಹೆಡಗೇವಾರ್ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಸ್ಮಾರಕಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಮಾತನಾಡಿದ ಶ್ರೀಧರ್ ಗಾಡ್ಗೆ , ಜಾತಿವಾರು ಜನಗಣತಿ ಬೇಡ, ಅದಕ್ಕೆ ಕಾರಣವೇನಿಲ್ಲ, ಜಾತಿವಾರು ಜನಗಣತಿ ಮಾಡುವುದರಿಂದ ನಾವೇನು ಸಾಧಿಸುತ್ತೇವೆ? ಜಾತಿಗಣತಿ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

ಜಾತಿ ಆಧಾರಿತ ಜನಗಣತಿಗೂ, ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ ಎಂದ ಗಾಡ್ಗೆ, ಮೀಸಲಾತಿ ಬೇರೆ ವಿಷಯ ಮತ್ತು ನೀವು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬಹುದು, ನಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಮತ್ತು ಮೀಸಲಾತಿ ಅಡಿಯಲ್ಲಿ ಬಂದಾಗ ಅದನ್ನು ಜಾತಿ ಉಲ್ಲೇಖಿಸಲಾಗುತ್ತದೆ. ಮೀಸಲಾತಿ ಮತ್ತು ಜಾತಿ ವ್ಯವಸ್ಥೆ ಬೇರೆ ಬೇರೆ ವಿಷಯಗಳಾಗಿದ್ದು, ಸಾಮಾಜಿಕ ಉನ್ನತಿಗಾಗಿ ಮೀಸಲಾತಿ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಆರ್‌ಎಸ್‌ಎಸ್‌ಗೆ ಸ್ಪಷ್ಟ ನಿಲುವು ಇದೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಪ್ರಗತಿ ಹೊಂದುವವರೆಗೂ ಮೀಸಲಾತಿ ಮುಂದುವರಿಯಲಿದೆ ಎಂಬ ನಿರ್ಣಯವನ್ನು ಪ್ರತಿನಿಧಿ ಸಭೆಯಲ್ಲಿ ಅಂಗೀಕರಿಸಲಾಗಿದೆ. ಇದು ಸಾಮಾಜಿಕ ವ್ಯವಸ್ಥೆಯಾಗಿದೆ. ಆದರೆ ಜಾತಿ ಆಧಾರಿತ ಜನಗಣತಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಹೆಡಗೇವಾರ್ ಸ್ಮೃತಿ ಮಂದಿರದ ಆವರಣದಲ್ಲಿ ಮಹಾರಾಷ್ಟ್ರದ ಆಡಳಿತ ಮೈತ್ರಿಕೂಟ ನಾಯಕರಿಗೆ ಆರೆಸ್ಸೆಸ್‌ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆರೆಸ್ಸೆಸ್ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌವಾಣ್, ಜಾತಿ ಆಧಾರಿತ ಜನಗಣತಿಯು ಪ್ರತಿ ಸಮುದಾಯದ ಜನ ಸಂಖ್ಯೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ತಲುಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ, ಜಾತಿ ಗಣತಿಯು ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಕಲ್ಯಾಣ ಸೌಲಭ್ಯಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಇನ್ನೋರ್ವ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಈ ಬಗ್ಗೆ ಮಾತನಾಡಿದ್ದು, ಜಾತಿ ಗಣತಿ ಬೇಡಿಕೆಯ ಬಗ್ಗೆ ಚರ್ಚೆ ನಡೆಯಬೇಕು. ಏಕೆಂದರೆ ಅಂತಹ ಸಮೀಕ್ಷೆಯು ಸರಿಯಾದ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರಕಾರ ದೇಶದಲ್ಲೇ ಮೊದಲ ಬಾರಿಗೆ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿತ್ತು. ಆ ಬಳಿಕ ವಿವಿಧ ರಾಜ್ಯಗಳಲ್ಲಿ ಜಾತಿಗಣತಿಗೆ ಆಗ್ರಹ ಕೇಳಿಬಂದಿತ್ತು. ಕಾಂಗ್ರೆಸ್ ಹೈಕಮಾಂಡ್, ಪ್ರತಿಪಕ್ಷಗಳು ಜಾತಿಗಣತಿಗೆ ಬೆಂಬಲಿಸಿದ್ದವು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!