Tuesday, November 24, 2026

ಪ್ರಾಯೋಗಿಕ ಆವೃತ್ತಿ

ಜಾತಿ-ಜಾತಿಗಳು ಹಾಗೂ ಧರ್ಮ- ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುವ ಧರ್ಮದ ದಂಗಲ್ ನಮಗೆ ಬೇಡವೇ ಬೇಡ : ವೈಜ್ಞಾನಿಕ ಚಿಂತಕ ಡಾ. ಹುಲಿಕಲ್ ನಟರಾಜು ಅಭಿಮತ

ವರದಿ ಡಾ. ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ 

ಇಂದು ದೇಶಾದ್ಯಂತ ಧರ್ಮದ ದಂಗಲ್ ನಡೆಯುತ್ತಿದೆ, ನಮಗೆ ಧರ್ಮದ ದಂಗಲ್ ಬೇಕಾಗಿಲ್ಲ ನಮಗೆ ಬೇಕಾಗಿರುವುದು ವಿಜ್ಞಾನದ ದಂಗಲ್, ವೈಚಾರಿಕತೆಯ ದಂಗಲ್ ಎಂದು ನಾಡಿನ ವೈಜ್ಞಾನಿಕ ಚಿಂತಕ ಡಾ. ಹುಲಿಕೆರೆ ನಟರಾಜ್ ಪ್ರತಿಪಾದಿಸಿದರು.

ಅವರು ಮಂಡ್ಯ ಜಿಲ್ಲೆಯ ಕೆ. ಆರ್.ಪೇಟೆ ತಾಲೂಕಿನ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಕ್ಷೇತ್ರದಲ್ಲಿ ನಡೆದ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು..

ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಸಂಘರ್ಷವನ್ನು ಉಂಟುಮಾಡುವ ಧರ್ಮದ ದಂಗಲ್ ನಮಗೆ ಬೇಕಾಗಿಲ್ಲ, ಶ್ರೀಸಾಮಾನ್ಯರಲ್ಲಿ ವೈಚಾರಿಕ ಮನೋಭಾವನೆಯನ್ನು ಮೂಡಿಸುವ ವಿಜ್ಞಾನದ ದಂಗಲ್ ಇಂದು ನಮಗೆ ಅವಶ್ಯಕತೆವಾಗಿ ಬೇಕಾಗಿದೆ. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ವಿಶ್ವದಲ್ಲಿಯೇ ಯಾವುದೂ ಇಲ್ಲ, ಮನುಷ್ಯತ್ವವನ್ನು ಪ್ರೀತಿಸುವ, ಸಹೋದರತ್ವಕ್ಕೆ ಒತ್ತಾಸೆ ನೀಡುವ, ಮೌಢ್ಯತೆಯನ್ನು ಹೊಡೆದೋಡಿಸುವ ವೈಚಾರಿಕ ದಂಗಲ್ ಇಂದು ಹೆಚ್ಚಾಗಿ ನಡೆಯಬೇಕಾಗಿದೆ ಎಂದು ಡಾ. ಹುಲಿಕಲ್ ನಟರಾಜ್ ಹೇಳಿದರು..

ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದಲ್ಲಿ ಕಾರ್ಗತ್ತಲಿನಲ್ಲಿ ಅಕ್ಷರದ ಜ್ಞಾನವನ್ನು ನೀಡುವ ಮೂಲಕ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲಾಗುತ್ತಿದೆ, ಪರಿಸರ ಹಾಗೂ ಪ್ರಕೃತಿಯನ್ನು ಪೂಜಿಸಿ ಆರಾಧಿಸುವ ಕಾಯಕವನ್ನು ಮಾಡುತ್ತಿರುವ ಶ್ರೀ ಮಾದೇಶ್ ಗುರೂಜಿಯವರ ಪ್ರೀತಿಪೂರ್ವಕ ವಿಶ್ವಾಸಕ್ಕೆ ಬೆಲೆ ನೀಡಿ ನನ್ನ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ನಾವು ಭಾರತದ ಸಂವಿಧಾನವನ್ನು ಗೌರವಿಸಬೇಕು, ಮೌಡ್ಯತೆ, ಕಂದಾಚಾರಗಳು ಸೇರಿದಂತೆ ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತವಾದ ನಾಗರೀಕ ಮೌಲ್ಯಗಳಿಗೆ ಒತ್ತು ನೀಡುವ ಮಾನವ ಧರ್ಮ ಇಂದು ನಮಗೆ ಬೇಕಾಗಿದೆ. ತಂದೆ ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸುವ ಭಾವನೆಯ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಿ ಹೇಳುವ ಕೆಲಸವನ್ನು ಮಾಡಬೇಕಾಗಿದೆ. ಮೊಬೈಲ್ ಫೋನು ಗಳಿಂದ ನಮ್ಮ ಮಕ್ಕಳನ್ನು ದೂರವಿಟ್ಟು ಪುಸ್ತಕ ಸಂಸ್ಕೃತಿಯ ಕಡೆಗೆ ನಮ್ಮ ಮಕ್ಕಳನ್ನು ಕರೆ ತರುವುದು ಇಂದಿನ ಅಗತ್ಯವಾಗಿದೆ ಎಂದು ಹುಲಿಕಲ್ ನಟರಾಜ್ ಹೇಳಿದರು…

ಸನಾತನ ಧರ್ಮ ರತ್ನಾಕರ ಡಾಕ್ಟರ್ ಮಾದೇಶ್ ಗುರೂಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ನಾಡಿನ ಜಾನಪದ ರತ್ನ ಡಾ. ಆಲೂರು ನಾಗಪ್ಪ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನವೀಯ ಸಂಬಂಧಗಳು, ಜಾನಪದ ಕಲೆಗಳ ಮಹತ್ವ ಕುರಿತು ಮಾತನಾಡಿದರು.

ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ರುದ್ರಮುನಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಪಂಚಭೂತೇಶ್ವರ ಟ್ರಸ್ಟ್ ನ ಕಾರ್ಯದರ್ಶಿ ಕಾಂತರಾಜು, ಉಪನ್ಯಾಸಕ ಕಾತರಘಟ್ಟ ವಾಸು, ಕಾಡುಮೆಣಸ ಚಂದ್ರು, ಶ್ರೀಮತಿ ದೇವಿಕ ಹುಲಿಕಲ್ ನಟರಾಜು ಸೇರಿದಂತೆ ಜನರು ಅಕ್ಷರ ಅಮಾವಾಸ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

1 COMMENT

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ