Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ದಲಿತ ಯುವಕನ ಮೇಲೆ ಜಾತಿ ದೌರ್ಜನ್ಯ: ಪ್ರಕರಣ ದಾಖಲು

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗೌಡಗೆರೆ ಗ್ರಾಮದ ದಲಿತ ಯುವಕ ಕಿರಣ್ ಜಿ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಳವಳ್ಳಿ ತಾಲೂಕಿನ ಬಸವನಪುರ ಗ್ರಾಮದ ಬಿ.ಪಿ ಗಿರೀಶ, ಗಂಗಾಧರ, ಚನ್ನಿಪುರ ಗ್ರಾಮದ ಸುರೇಶ, ಅಗಸನಪುರ ಗ್ರಾಮದ ಅಪ್ಪಯ್ಯ, ಬಸವನಪುರದ ಪ್ರಸನ್ನ ಹಾಗೂ ಇತರರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ 504, 506, 355, 149, 323, 324, 327ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹಲಗೂರು ಪೊಲೀಸರಿಗೆ ದೂರು ನೀಡಿರುವ ಕಿರಣ್, “ನನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹಿಂದಿನಿಂದ ಕಾರಿನಲ್ಲಿ ಬಂದ ಆರೋಪಿಗಳು ಬೈಕ್‌ಗೆ ಗುದ್ದುವ ರೀತಿಯಲ್ಲಿ ಬೆದರಿಸಿದ್ದಾರೆ. ಹಳೆಯ ದ್ವೇಷದಿಂದ ನಮ್ಮನ್ನು ತಡೆದು ನಿಲ್ಲಿಸಿ, ನನ್ನ ಕುತ್ತಿಗೆ ಹಿಡಿದು ಎಳೆದಾಡಿದ್ದಾರೆ. ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ‘ನಮ್ಮನ್ನು ಎದುರು ಹಾಕಿಕೊಂಡು ಮರೆಯುತ್ತಿದ್ದೀಯಾ. ನಿನ್ನ ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನೀನು ದಲಿತ ಜಾತಿಗೆ ಸೇರಿದವನೆಂದು ನಿಂದಿಸಿ, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ನನ್ನನ್ನು ಕೆಡವಿ, ಚಪ್ಪಲಿ ಕಾಲಿನಿಂದ ನನ್ನ ಎದೆ, ಹೊಟ್ಟೆಗೆ ಒದ್ದಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನನ್ನ ಬಟ್ಟೆಯನ್ನು ಹರಿದು, ನಾನು ಕತ್ತಿನಲ್ಲಿ ಹಾಕಿದ್ದ 20 ಗ್ರಾಂ ಚಿನ್ನದ ಸರ ಹಾಗೂ ಜೇಬಿನಲ್ಲಿದ್ದ 50,000 ರೂಪಾಯಿಯನ್ನೂ ಕಿತ್ತುಕೊಂಡಿದ್ದಾರೆ. ಬರಿ ಚಡ್ಡಿಯಲ್ಲಿ 1 ಕಿ.ಮೀ ನಡೆಸಿಕೊಂಡು ಎಳೆದೊಯ್ದಿದ್ದಾರೆ” ಎಂದು ಕಿರಣ್ ಆರೋಪಿಸಿದ್ದಾರೆ.

“ಬಿ.ಪಿ ಗಿರೀಶ ಎಂಬಾತ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿದ್ದು, ಆತ, ‘ನನಗೆ ರಾಜಕೀಯ ಬೆಂಬಲವಿದೆ. ನನ್ನ ಮೇಲೆ ಪ್ರಕರಣ ದಾಖಲಿಸಲು ಕೂಡ ಆಗುವುದಿಲ್ಲ. ನಾನು ಎಲ್ಲದರಿಂದ ಬಚಾವ್ ಆಗಬಲ್ಲೆ’ ಎಂದು ಹೇಳಿ, ಕಪಾಳಕ್ಕೆ ಹೊಡೆದಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ, ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ. ಕಿರಣ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!