ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಂಡ್ಯ ತಾಲ್ಲೂಕು ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆ ಆಯೋಜಿಸಬೇಕೆಂದು ಶಾಸಕ ಗಣಿಗ ರವಿಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಡ್ಯ ಜಿಲ್ಲಾ ಪಂಚಾಯತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ
ಮಂಡ್ಯ ತಾಲ್ಲೂಕು ಮತ್ತಷ್ಟು ಉತ್ತಮ ಸಾಧನೆ ಮಾಡಲು ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯ ಶಿಕ್ಷಕರ ಸಭೆ ಕರೆಯೋಣ.ಅಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಹೇಗೆ ಫಲಿತಾಂಶವನ್ನು ವೃದ್ಧಿಗೊಳಿಸುವುದು.ಎಸ್ಎಸ್ಎಲ್ಸಿ ನಂತರ ಮುಂದೆ ವಿದ್ಯಾರ್ಥಿಗಳು ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಮಾಹಿತಿ ಕೂಡ ನೀಡಬೇಕು.ಫಲಿತಾಂಶ ಉತ್ತಮ ಗೊಳಿಸುವ ವಿಧಾನಗಳ ಬಗ್ಗೆ ಚರ್ಚೆ ನಡೆಸೋಣ ಎಂದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್ ಕೊಡಿ
ಮಂಡ್ಯ ತಾಲೂಕು ಪ್ರಗತಿ ಪರಿಶೀಲನಾ ಸಭೆಗೆ ಕೆಲವು ಅಧಿಕಾರಿಗಳು ಗೈರಾಗಿದ್ದಾರೆ.ಇನ್ನು ಕೆಲವರು ಅಸಡ್ಡೆಯಿಂದ ಉತ್ತರ ನೀಡುತ್ತಾರೆ.ಪ್ರಗತಿ ಪರಿಶೀಲನಾ ಸಭೆ ಇರುವುದು ಅಧಿಕಾರಿಗಳು ತಮ್ಮ ಇಲಾಖೆಯ ಕೆಲಸಗಳ ಬಗ್ಗೆ ಜನರಿಗೆ ಅಗತ್ಯ ಮಾಹಿತಿಗಳನ್ನು ತಿಳಿಸುವುದಕ್ಕಾಗಿ. ಆದರೆ ಕೆಲವು ಅಧಿಕಾರಿಗಳು ಅನುಮತಿ ಪಡೆಯದೆ ಸಭೆಗೆ ಗೈರಾಗಿದ್ದಾರೆ.ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.ಇಂದಿನ ಸಭೆಗೆ ಅನುಮತಿ ಪಡೆಯದೆ ಗೈರಾದ ಉತ್ತರ ವಲಯ ಬಿಇಓ ಸೌಭಾಗ್ಯ ಹಾಗೂ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶನ ಜೈಪ್ರಕಾಶ್ ಅವರಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಗ್ಗೆ ವಿಶೇಷ ಗಮನಹರಿಸಿ ಅವರ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಫಲಿತಾಂಶ ಬರುವಂತೆ ಮಾಡೋಣ ಎಂದರು.

ಎಲ್ಲಾ ಶಾಲೆಗಳಲ್ಲೂ ಮೂಲಭೂತ ಸೌಕರ್ಯ ಸಮರ್ಪಕವಾಗಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ದುರಸ್ಥಿಗೊಳ್ಳಬೇಕಾದ ಶಾಲೆಗಳ ಪಟ್ಟಿ ಸಿದ್ಧ ಪಡಿಸಿ ಮಾಹಿತಿ ನೀಡಿ ಎಂದು ತಿಳಿಸಿದರು. ಮಕ್ಕಳಿಗೆ ಶಾಲೆಗಳಲ್ಲಿ ಮಾನಸಿಕ ಒತ್ತಡ ನಿವಾರಣೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಕೌನ್ಸೆಲಿಂಗ್ ಮಾಡಿಸಿ ಮಕ್ಕಳ ಕೌಶಲ್ಯ ಮತ್ತು ಶೈಕ್ಷಣಿಕ ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದರು.
ಆಲೆಮನೆಗೆ ಭೇಟಿ ನೀಡಿ
ಮಂಡ್ಯ ತಾಲೂಕಿನ ಕೆಲವು ಆಲೆಮನೆಗಳಲ್ಲಿ ಕಲಬೆರಕೆ ಬೆಲ್ಲ ತಯಾರಾಗುತ್ತಿದೆ ಎಂಬ ಆರೋಪ ದಟ್ಟವಾಗಿದೆ.ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಆಲೆಮನೆಗೆ ಭೇಟಿ ನೀಡಿ ಕಲಬೆರಕೆ ಬೆಲ್ಲದ ಮೇಲೆ ನಿಗಾ ವಹಿಸಬೇಕು ಎಂದರು.
ರಾತ್ರಿ ವೇಳೆ ವೈದ್ಯರಿರಲಿ
ಮಂಡ್ಯ ತಾಲ್ಲೂಕಿನ ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ರಾತ್ರಿ ವೇಳೆ ವೈದ್ಯರು ಇರಲ್ಲವೆಂದು ಸಾಕಷ್ಟು ದೂರು ಕೇಳಿ ಬರುತ್ತಿವೆ. ಎಲ್ಲಾ ಆಸ್ಪತ್ರೆಗಳಲ್ಲೂ ರಾತ್ರಿ ವೇಳೆಯಲ್ಲಿ ವೈದ್ಯರು ಇರಬೇಕು. ವೈದ್ಯರ ಲಭ್ಯತೆ ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಅಗತ್ಯವಿರುವ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿದರು.
ಭತ್ತ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಖರೀದಿಯನ್ನು ಪ್ರಾರಂಭಿಸಲಾಗುವುದು. ಕೃಷಿ ಇಲಾಖೆಗೆ ಸೇರಿದ ಯೋಜನೆಗಳನ್ನು ರೈತರಿಗೆ ತಿಳಿಸಿ. ಗುಂಪು ಕರೆ, ಪೋಸ್ಟರ್, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚಾರ ಮಾಡಿ. ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ 15 ಜನರಿಗೆ ಹನಿ ನೀರಾವರಿ ಯೋಜನೆಯಡಿ ಅನುದಾನ ನೀಡಲಾಗಿದೆ. ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ 11 ಜನರಿಗೆ ಅನುದಾನ ನೀಡಲಾಗಿದೆ. ಅಧಿಕಾರಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಕಲಬೆರಕೆ ಪಶು ಆಹಾರ
ಪಶುಗಳಿಗೆ ನೀಡಲಾಗುವ ಕಲಬೆರಕೆ ಆಹಾರದಿಂದ ಜಾನುವಾರಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ.ಈ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ.ಕಲಬೆರೆಕೆ ಪಸದು ಆಹಾರ ಮಾರಿದವರ ಬಗ್ಗೆ ಮಾಹಿತಿ ನೀಡಿ, ನಿಮ್ಮ ಹೆಸರನ್ನು ಗೌಪ್ಯವಾಗಿಡುತ್ತೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರುವಂತೆ ಮಾಡಿ,ಆಗ ವ್ಯಾಪಾರಿಗಳು ಹೆದರಿ ಕಲಬೆರೆಕೆ ಮಾಡುವುದಿಲ್ಲ ಎಂದು ಹೇಳಿದರು.
ಅನರ್ಹರ ಕೈಬಿಡಿ
ಅನರ್ಹ ಬಿ.ಪಿ.ಎಲ್ ಕಾರ್ಡ್ ಬಳಕೆದಾರರ ಹೆಸರನ್ನು ಕೈ ಬಿಡಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಮಂಡ್ಯ ತಾಲೂಕಿನ 1667 ಬಿ.ಪಿ.ಎಲ್ ಕಾರ್ಡ್ ಬಳಕೆದಾರರನ್ನು ಅರ್ಹ ಪಟ್ಟಿಯಿಂದ ಕೈ ಬೀಡಲಾಗಿದೆ. ಅಧಿಕಾರಿಗಳು ಬಿ.ಪಿ.ಎಲ್ ಬಳಕೆದಾರರ ಪಟ್ಟಿಯನ್ನು ಕೈ ಬಿಡುವ ಮೊದಲು ಅವರ ಆರ್ಥಿಕ ಸ್ಥಿತಿಯನ್ನು ಅವಲೋಕಿಸಿ ರದ್ದು ಪಡಿಸಿ ಅರ್ಹರನ್ನು ಬಿ.ಪಿ.ಎಲ್ ಪಟ್ಟಿಯಿಂದ ಕೈ ಬಿಡಬೇಡಿ ಎಂದು ಹೇಳಿದರು.
ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ ಪದವಿ 921 ಹಾಗೂ 25 ಡಿಪ್ಲೊಮಾ ಒಟ್ಟು 936 ನಿರುದ್ಯೋಗಿಗಳು ಯುವನಿಧಿ ಯೋಜನೆ ಪಡೆದುಕೊಳ್ಳುತ್ತಿದ್ದಾರೆ. ಯುವನಿಧಿಯ ಕುರಿತಾಗಿ ಎಲ್ಲಾ ಕಾಲೇಜುಗಳಲ್ಲಿ ಪ್ರಚಾರ ಕೈಗೊಳ್ಳಿ. ಎಲ್ಲಾ ಯುವನಿಧಿ ಫಲಾನುಭವಿಗಳನ್ನು ಒಗ್ಗೂಡಿಸಿ ಅವರಿಗೆ ವಿವಿಧ ಕಾರ್ಯಾಗಾರವನ್ನು ರೂಪಿಸಿ.ಮಂಡ್ಯ ತಾಲ್ಲೂಕಿನಲ್ಲಿ 18 ಹಾಸ್ಟೆಲ್ ಗಳು ಕಾರ್ಯ ನಿರ್ವಹಿಸುತ್ತಿವೆ ಸದರಿ ಸುಮಾರು 1750 ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2 ಬಾಲಕಿಯರ ಹಾಸ್ಟೆಲ್ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಆಹಾರದ ಗುಣಮಟ್ಟದ ಕಳಪೆಯಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಶೀಘ್ರವೇ ಪರಿಶೀಲಿಸಿ ನಾನು ಸಹ ಅಲ್ಲಿಗೆ ಬಂದು ಪರೀಕ್ಷೆ ಮಾಡುತ್ತೇನೆ. ಅಧಿಕಾರಿಗಳು ಹಾಸ್ಟೆಲ್ ಗಳಿಗೆ ತಿಂಗಳಿಗೆ 2 ರಿಂದ 3 ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ತಾಕೀತು ಮಾಡಿದರು.
ಬ್ಯಾಂಕ್ ಗಳು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿವೆ ಯಾವುದೇ ಬ್ಯಾಂಕ್ ಒತ್ತಾಯದಿಂದ ಸಾಲ ಮರುಪಾವತಿ ಮಾಡಿಸಿಕೊಂಡರೆ ಬ್ಯಾಂಕ್ ನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಿರತೆ ಹಾವಳಿ ನಿಯಂತ್ರಿಸಿ
ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ ಚಿರತೆಯ ಉಪಟಳ ಹೆಚ್ಚಾಗಿದೆ.ರೈತರು,ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಅಗತ್ಯವಿರುವ ಕಡೆ ಬೋನು ಇಟ್ಟು ಚಿರತೆ ಹಿಡಿಯಿರಿ. ಇಲ್ಲವಾದಲ್ಲಿ ಜನ ಜಾನುವಾರುಗಳಿಗೆ ಹಾನಿ ಸಂಭವಿಸುತ್ತದೆ. ಅರಣ್ಯ ಇಲಾಖೆ ಎಚ್ಚೆತ್ತು ಕಾರ್ಯೋನ್ಮುಖರಾಗಿ ಎಂದರು.
ರಸ್ತೆ ಬದಿ ಒಣಗಿರುವ ಮರಗಳನ್ನು ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಕಡಿದು ಹಾಕಿ ಜನರಿಗೆ ಪ್ರಾಣಾಪಾಯವಾಗುವುದನ್ನು ತಡೆಯಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಹೈಟೆಕ್ ಪ್ರವಾಸಿ ಮಂದಿರ
ಮಂಡ್ಯ ನಗರದಲ್ಲಿರುವ ಪ್ರವಾಸಿ ಮಂದಿರದ ಮುಂಭಾಗದ ಜಾಗ ಬಳಸಿಕೊಂಡು ಹೈಟೆಕ್ ಪ್ರವಾಸಿ ಮಂದಿರ ನಿರ್ಮಿಸಲು ಅನುದಾನ ಮಂಜೂರಾಗಿದ್ದು,ಶೀಘ್ರವಾಗಿ ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
3.50 ಕೋಟಿ ರೂ. ವೆಚ್ಚದಲ್ಲಿ ಉತ್ತಮ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ.ಕೆನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣ ಸಂಬಂದ ಅಂದಾಜು ಪಟ್ಟಿ ಸಿದ್ಧವಾಗಿದ್ದು,ಆಡಳಿತಾತ್ಮಕ ಅನುಮೋದನೆ ನೀಡಬೇಕಿದೆ ಎಂದು ತಿಳಿಸಿದರು.
ಮದ್ಯ ಮಾರಾಟ ತಡೆಯಿರಿ
ರಾಷ್ಟ್ರೀಯ ಹೆದ್ದಾರಿ ಬಳಿ ತಡರಾತ್ರಿಯಾದರೂ ಮದ್ಯ ಮಾರಾಟವನ್ನು ಕೆಲವರು ಮಾಡುತ್ತಿದ್ದಾರೆ. ಎಲ್ಲೆಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆಯೊ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು. ತಡ ರಾತ್ರಿ ಮದ್ಯ ಮಾರಾಟ ಮಾಡುವವರ ಲೈಸೆನ್ಸ್ ಅನ್ನು ರದ್ದು ಗೊಳಿಸಿ ಎಂದು ಹೇಳಿದರು.
ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಹಾಗೂ ಮಂಡ್ಯ ತಾಲ್ಲೂಕು ಆಡಳಿತಾಧಿಕಾರಿ ಶಿವಲಿಂಗಯ್ಯ, ಮಂಡ್ಯ ತಹಶೀಲ್ದಾರ್ ಎಸ್.ವಿಶ್ವನಾಥ್, ಮಂಡ್ಯ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರುದ್ರಪ್ಪ, ಡಿ.ವೈ.ಎಸ್ಪಿ ಲಕ್ಷ್ಮಿ ನಾರಾಯಣ್, ಮಂಡ್ಯ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ, ಮಂಡ್ಯ ತಾಲ್ಲೂಕು ಯೋಜನಾಧಿಕಾರಿ ವೆಂಕಟರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




