ಟನ್ ಕಬ್ಬಿಗೆ 4500 ರೂ. ನಿಗದಿ, ಹಾಲಿನ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಡ್ಯ ನಗರದ ಸರ್ ಎಂ.ವಿ. ಪ್ರತಿಮೆ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು 100ನೇ ದಿನ ಪೂರೈಸಿದ ಸಂದರ್ಭದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿರುವ ರೈತಸಂಘವು ಆಮರಣಾಂತರ ಉಪವಾಸ ಸತ್ಯಾಗ್ರಹ ಆರಂಭಿಸಿದೆ.
ಬಿಜೆಪಿ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಗುರುವಾರಕ್ಕೆ 102 ಪೂರೈಸಿದೆ. ಸರ್ಕಾರಕ್ಕೆ ಬಿಸಿಮುಟ್ಟಿಸಲು ಆಮರಣಾಂತ ಉಪವಾಸಕ್ಕೆ ಮೊರೆ ಹೋಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದನ್ನು ನೋಡಿ ಎಂಬ ಆಕ್ರೋಶದ ನುಡಿಗಳನ್ನು ರೈತ ನಾಯಕರು ಹಾಗೂ ಪ್ರಗತಿಪರರು ಹೇಳುತ್ತಿದ್ದಾರೆ.
ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸುತ್ತಿಲ್ಲ
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸುತ್ತಿಲ್ಲ, ಹಾಗಾಗಿ 100 ದಿನ ಪೂರೈಸಿದರೂ ಕ್ರಮ ಕೈಗೊಂಡದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ನಮ್ಮ ಬೇಡಿಕೆಯನ್ನು ಪ್ರಾಣ ಕೊಟ್ಟಾದರೂ ಈಡೇರಿಸಿಕೊಳ್ಳಲು ಆಮರಣಾಂತ ಉಪವಾಸವನ್ನು ಆರಂಭಿಸಲಾಗಿದೆ ಎಂದು ಆಕ್ರೋಶಭರಿತವಾಗಿ ನುಡಿದರು.
ರೈತರ ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸುವ ಜನಪ್ರತಿನಿಧಿಗಳು ಕೇವಲ ಆಶ್ವಾಸನೆಗೆ ಮಾತ್ರ ಮೀಸಲಿರುವುದು ನಾಚಿಕೆಗೇಡಿನ ಸಂಗತಿ. ಎಲ್ಲರಿಗೂ ಅನ್ನ ಕೊಡುವ ರೈತ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಈಗ ಉಪವಾಸ ಮಾಡಿ ಹಕ್ಕು ಪಡೆಯಲು ಹೊರಟಿರುವುದು ದುರಂತ ಎಂದು ಟೀಕಿಸಿದರು.
ರೈತ ಸಂಘದ ಮುಖಂಡರಾದ ಮಲ್ಲನಾಯಕನಕಟ್ಟೆ ವಿಜಯ ಕುಮಾರ್, ಬೂತನಹೊಸೂರು ಸಂತೋಷ್, ವಿನೋದ್ಬಾಬು, ಅಣ್ಣಯ್ಯ ಜಿ.ಮಲ್ಲಿಗೆರೆ, ಗೂಳೂರು ರಾಮಕೃಷ್ಣ ಅವರು ಆಮರಣಾಂತ ಉಪವಾಸ ಆರಂಭಿಸಿದ್ದಾರೆ.




